ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ನಿರತರಾಗಿದ್ದ ಪ್ರಮುಖ ಆರೋಪಿಗಳನ್ನು ಮಲ್ಲೇಶ್ವರದ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೈಬರ್) ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ನೀಡಿದ ದೂರು ಆಧರಿಸಿ ನವೆಂಬರ್ 13ರಂದು ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿತ್ತು. ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಪ್ರಕರಣದ ತನಿಖೆ ನಡೆಸಲಾಗಿತ್ತು. ಕೆಲವು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಸೈಬರ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಅಭ್ಯರ್ಥಿಗಳ ಲಾಗಿನ್, ಪಾಸ್‌ವರ್ಡ್, ಗೋಪ್ಯ ಕೀ ಅನ್ನು ಅನಧಿಕೃತವಾಗಿ ಪಡೆದುಕೊಂಡು ಅವರ ಪರವಾಗಿ ಆಯ್ಕೆ ನಮೂದಿಸಿ ಕೆಲವು ಕಾಲೇಜುಗಳಾದ ಬಿಎಂಎಸ್, ಆಕಾಶ್, ನ್ಯೂ ಹೊರೈಜಾನ್ ಎಂಜಿನಿಯರಿಂಗ್ ಕಾಲೇಜುಗಳಿಗೆ ಲಾಭ ಮಾಡಿಕೊಡಲಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳು ವಂಚಿತರಾಗಿದ್ದಾರೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ಮೋಸ
ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು.