ಬೆಂಗಳೂರು: ಸೀ ಸ್ಕೌಟ್ಸ್ ಆಂಡ್ ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸೇವಾಭಾವ, ಜವಾಬ್ದಾರಿ, ನೌಕದಳ ಹಾಗೂ ನಾಯಕತ್ವದ ಗುಣಬೆಳೆಸಲಿದ್ದು, ಯುವಕರು ಹೆಚ್ಚು ಹೆಚ್ಚು, ಸೀ ಸ್ಕೌಟ್ಸ್ ಆಂಡ್ ಗೈಡ್ಸ್ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ನೌಕಾಪಡೆಯ ಅಧಿಕಾರಿ ಕ್ಯಾಪ್ಟನ್ ಡಾ. ಉದಯ್ ಚಂದ್ ಕೊಂಡತ್ ಕರೆ ನೀಡಿದ್ದಾರೆ.
“ನೌಕಾದಳ ದಿನಾಚರಣೆ” ಅಂಗವಾಗಿ ರೆಜೆನ್ಸಿ ಪಬ್ಲಿಕ್ ಶಾಲೆಯ “ಸಿ ಸ್ಕೌಟ್ಸ್ ಅಂಡ್ ಗೈಡ್ಸ್ ಆಫ್ ಇಂಡಿಯಾ” ಬೆಂಗಳೂರು ವಿಭಾಗದ ಮಕ್ಕಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೀ ಸ್ಕೌಟ್ಸ್ ಆಂಡ್ ಗೈಡ್ಸ್” ಎಂದರೆ ಸಮುದ್ರ ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿರುವ ಸ್ಕೌಟ್ ಮತ್ತು ಗೈಡ್ ವಿಭಾಗವಾಗಿದ್ದು, ಇದು ಯುವಕರಲ್ಲಿ ಶಿಸ್ತು, ಜವಾಬ್ದಾರಿ ಮತ್ತು ನಾಯಕತ್ವವನ್ನು ಬೆಳೆಸಲಿದೆ, ಅಷ್ಟೆಅಲ್ಲದೆ, ಸಮುದ್ರಯಾನ, ಹಡಗು ನಡೆಸುವಿಕೆ ಮತ್ತು ನಾವಿಕ ಕಲೆಗಳಂತಹ ಚಟುವಟಿಕೆಗಳನ್ನು ಕಲಿಸಲಿದೆ. ಭಾರತದಲ್ಲಿ, ಈ ಸಂಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ನೌಕಾ, ವಾಯು ಪಡೆಯಂತೆ ಸೀ ಸ್ಕೌಂಟ್ಸ್ ಅಂಡ್ ಗೈಡ್ಸ್ ಕೂಡ ಅತಿ ಅವಶ್ಯಕವಾಗಿದ್ದು, ಸಮುದ್ರಯಾನ ನೌಕೆಯು ನಮ್ಮ ದೇಶದ ರಕ್ಷಣೆಯಲ್ಲಿ ಪ್ರಮುಖಸ್ಥಾನ ವಹಿಸಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿಯೂ ಹೆಚ್ಚಿನ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿ, ದೇಶದ ಉತ್ತಮ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಬೆಳೆವಂತೆ ಹಿತವಚನ ನೀಡಿದರು. ನೌಕಾದಳದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಅಪಾರ ಅವಕಾಶಗಳು ಲಭ್ಯವಿದ್ದು, ಕರ್ನಾಟಕದ ಶಾಲೆಗಳು ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಅವರು ಕಿವಿ ಮಾತು ಹೇಳಿದರು.
ಸಿ ಸ್ಕೌಟ್ಸ್ ಅಂಡ್ ಗೈಡ್ಸ್ ಆಫ್ ಇಂಡಿಯಾ–ಬೆಂಗಳೂರು ವಿಭಾಗದ ವತಿಯಿಂದ ಕ್ಯಾಪ್ಟನ್ ಸೂಪರಿಂಟೆಂಡೆಂಟ್ ಮತ್ತು ಸೀ ಸ್ಕೌಟ್ಸ್ ಅಂಡ್ ಗೈಡ್ಸ್ ಇಂಡಿಯಾ ಸಂಸ್ಥಾಪಕ ಡಾ ಗೋಪಿಶೆಟ್ಟಿ ರವರ ಮಾರ್ಗದರ್ಶನದಲ್ಲಿ ಆಚರಿಸಲಾಯಿತು.
ಕರ್ನಾಟಕದಲ್ಲಿಯೂ ಸೀ ಸ್ಕೌಟ್ಸ್ ಆಂಡ್ ಗೈಡ್ಸ್ಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು, ಮಕ್ಕಳೂ ನೌಕಾಪಡೆಗೆ ಸೇರ್ಪಡೆಯುವ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಪ್ಯಾಕ್ ಕಾರ್ಯಕ್ರಮದ ಉಸ್ತುವಾರಿ ರಾಘವೇಂದ್ರ ಪೂಜಾರಿ ಎಚ್.ಎಸ್, ಗೀತಾ ಚಂದ್ರಶೇಖರ್ (ಮಿಡ್ ಶಿಪ್ಮೆಂಟ್, ಸಿ ಸ್ಕೌಟ್ಸ್ ಅಂಡ್ ಗೈಡ್ಸ್), ಪ್ರಾಂಶುಪಾಲೆ ರಮಾ ಕಾರ್ತಿಕ್, ಶಿಕ್ಷಕರಾದ ದೀಪಿಕಾ, ಕ್ರಿಪಾ ಡಿ. ಶಾ, ಕೋಕಿಲ, ಮತ್ತಿತತರು ಉಪಸ್ಥಿತರಿದ್ದರು.

