ಕಲಬುರಗಿ: ಎಸ್ ಸಿ, ಎಸ್ ಟಿ ವರ್ಗಗಳ ಟಿಎಸ್ ಪಿ ಅನುದಾನವನ್ನು ನಮ್ಮ ಸರ್ಕಾರ ನಿಯಮ ಬದ್ಧವಾಗಿಯೇ ವೆಚ್ಚ ಮಾಡುತ್ತಿದ್ದು, ಒಂದು ವೇಳೆ ಅನ್ಯ ಇಲಾಖೆಗಳಿಗೆ ವೆಚ್ಚ ಮಾಡಿದ್ದರೆ ದಾಖಲೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಡೆ ತಿರುಗಿಸಿದ್ದರೆ (ಡೈವರ್ಟ್) ಬಿಜೆಪಿ ದಾಖಲೆ ನೀಡಲಿ. ಆಗ ಅದರ ಬಗೆಗೆ ಕ್ರಮ ಜರುಗಿಸಲಾಗುವುದು’ ಎಂದು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿಎಸ್ಪಿ, ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾದ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವರು ವೃಥಾ ಆರೋಪ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ದಾಖಲೆ ನೀಡಿದರೆ ಸರ್ಕಾರ ಕ್ರಮಕೈಗೊಳ್ಳಲಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಎಸ್ ಸಿ, ಎಸ್ ಟಿ, ಟಿಎಸ್ ಪಿ ಅನುದಾನವನ್ನು ಇತರೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಆ ವಿಷಯವನ್ನು ಬೊಮ್ಮಾಯಿ ಅವರೇ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈ ಕಾಯ್ದೆಯ ‘7ಡಿ’ ಉಪವಿಧಿ ರದ್ದುಗೊಳಿಸಿದ್ದೇವೆ. ಈಗ 7ಎ, 7ಬಿ,7ಸಿ ನಿಯಮದಡಿಯಲ್ಲೇ ಅನುದಾನವನ್ನು ವಿನಿಯೋಗಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿ ನಾಯಕರು ದಲಿತರು, ಆದಿವಾಸಿಗಳ ಬಗೆಗೆ ಹುಸಿ ಪ್ರೀತಿ, ಕಾಳಜಿ ತೋರುವುದನ್ನು ಬಿಡಬೇಕು. ಅವರಿಗೆ ಧೈರ್ಯ, ಸಾಮರ್ಥ್ಯ, ಕಾಳಜಿ ಇದ್ದರೆ ಎಸ್ ಸಿ, ಎಸ್ ಟಿ, ಟಿಎಸ್ ಪಿ ಕಾಯ್ದೆಯನ್ನು ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಜಾರಿಗೊಳಿಸಲು ಪ್ರಧಾನಿ ಮೋದಿ ಅವರ ಕೈ ಕಾಲು ಹಿಡಿದು ಪ್ರಯತ್ನಿಸಲಿ. ಅದನ್ನು ಬಿಟ್ಟು ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವುದು ಬೇಡ ಎಂದು ಕಿಡಿ ಕಾರಿದರು.
ಪ್ರಧಾನಿ ಮೋದಿ ಅವರ ಮನದ ಮಾತು ಕೇಳಿ ಕೇಳಿ ಸಾಕಾಗಿದೆ. ಏನಾದರೂ ಮಾತನಾಡಬೇಕಾದರೆ ಶ್ರಮ, ಅನುದಾನ, ಕೊಡುಗೆ ಇರಬೇಕು. ಹಿಂದೆ ಕಲಬುರಗಿ ರೊಟ್ಟಿ ಬಗ್ಗೆ ಮಾತನಾಡಿದ್ದರು. ಆ ರೊಟ್ಟಿಗೆ ಅವರ ಕೊಡುಗೆ ಏನು? ಶೂನ್ಯ. ಈಗ ಕಲಬುರಗಿ ಕೋಟೆ ಬಗ್ಗೆ ಮಾತನಾಡಿದ್ದಾರೆ. ಆ ಕೋಟೆಗೆ ಮೋದಿ ಕೊಡುಗೆ ಏನು? ಮತ್ತೆ ಶೂನ್ಯ. ಬೇರೆಯವರು ಪಟ್ಟ ಶ್ರಮಕ್ಕೆ ಇವರು ಕ್ರೆಡಿಟ್ ತೆಗೆದುಕೊಳ್ಳುವುದರಲ್ಲಿ ಇವರು ನಿಸ್ಸಿಮರು ಎಂದು ವ್ಯಂಗ್ಯವಾಡಿದರು.
ಕೇಂದ್ರೀಯ ವಿ.ವಿಗಳು ಆರ್‌ಎಸ್‌ಎಸ್ ಶಾಖೆಗಳೇ?
ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಗೆ ಕೇಂದ್ರೀಯ ವಿವಿ ತಂದರು. ಆದರೆ, ಇಂದು ಕೇಂದ್ರೀಯ ವಿಶ್ವವಿದ್ಯಾಲಯಗಳು ಆರ್‌ಎಸ್‌ಎಸ್ ಶಾಖೆಗಳಾಗಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ನಿರಾಕರಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಟೀಕಿಸಿದರು.
ನರೇಂದ್ರ ಮೋದಿ ಅವರು ಹೆಚ್ಚಿನ ಅವಧಿಗೆ ಪ್ರಧಾನಿಯಾಗುವ ಮೂಲಕ ಇಂದಿರಾ ಗಾಂಧಿ ದಾಖಲೆ ಮುರಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ದಾಖಲೆಗಳನ್ನು ಮುರಿಯುವುದು ದೊಡ್ಡದಲ್ಲ. ಆದರೆ ಮೋದಿ ಸಾಧನೆ ಏನು? ಇಂದಿರಾ ಗಾಂಧಿ ಅವರು ಮಾಡಿದ ಅರ್ಧದಷ್ಟಾದರೂ ಕೆಲಸ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಇಂದಿರಾ ಗಾಂಧಿ ಅವರು ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದರು. ಇವರು ಭಾರತ –ಪಾಕ್ ನಡುವಣ ಕದನ ವಿರಾಮ ಯಾರು ನಿರ್ಧರಿಸಿದರು ಎಂದು ಹೇಳಲು ಸಿದ್ಧರಿಲ್ಲ. ಇಂದಿರಾ 44 ಪತ್ರಿಕಾಗೋಷ್ಠಿ ನಡೆಸಿದ್ದರು, ಇವರೇನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.