ಸುಪ್ರೀಂ ಕೋರ್ಟ್‌ ತಪರಾಕಿ ಬೆನ್ನಲ್ಲೇ ಕುಸಿದ SBI ಶೇರು ದರ

Most read

ಹೊಸದಿಲ್ಲಿ: ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಕಾಲಾವಕಾಶ ಕೋರಿದ್ದ SBI (State Bank of India) ಗೆ ಸುಪ್ರೀಂಕೋರ್ಟ್‌ ತರಾಟೆ ತೆಗೆದುಕೊಂಡು, ನಾಳೆಯೊಳಗೆ ಮಾಹಿತಿ ನೀಡುವಂತೆ ಹೇಳಿದ ಬೆನ್ನಲ್ಲೇ, ಶೇರು ಮಾರುಕಟ್ಟೆಯಲ್ಲಿ SBI ಶೇರು ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಲು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಪಾಲಿಸಲು ತನಗೆ ಕಾಲಾವಕಾಶ ನೀಡಬೇಕು ಎಂದು SBI ವಿನಂತಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ, SBI ನಿಲುವಿನ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಲ್ಲದೆ, ನಾಳೆ ಸಂಜೆ ಕಚೇರಿ ಸಮಯ ಮುಗಿಯುವುದರೊಳಗೆ ಮಾಹಿತಿ ನೀಡುವಂತೆ ಆದೇಶಿಸಿ SBI ಅರ್ಜಿ ವಜಾಗೊಳಿಸಿತ್ತು.

ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ SBI ನ ಶೇರು ದರ ಗಣನೀಯವಾಗಿ ಕುಸಿತ ಕಂಡಿತು. ದೇಶದ ಉನ್ನತ ನ್ಯಾಯಾಲಯದ ತೀರ್ಪಿನ ನಂತರ SBI ಶೇ.2 ರಷ್ಟು ಕುಸಿತ ಅನುಭವಿಸಿತು. ಮಧ್ಯಾಹ್ನ 3-30ರ ಸುಮಾರಿಗೆ SBI ಶೇರು ದರ ರೂ.773 ಆಗಿದ್ದು, ಹದಿನೈದು ರುಪಾಯಿಯಷ್ಟು ಇಳಿಕೆ ಕಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಬಿ.ಆರ್.ಗವಾಯ್‌, ಜೆ.ಬಿ.ಪರ್ದಿವಾಲಾ, ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನಪೀಠ ಇಂದು SBI ಅರ್ಜಿಯನ್ನು ವಜಾಗೊಳಿಸಿ, ಮಾ.12ರೊಳಗೆ ಮಾಹಿತಿ ಸಲ್ಲಿಸಲು ಆದೇಶಿಸಿತು.

ಜೂ.30ರವರೆಗೆ ಕಾಲಾವಕಾಶ ಕೋರಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ SBI ವಿರುದ್ಧ ಕಿಡಿಕಾರಿದ ನ್ಯಾಯಾಧೀಶರು, ನೀವು ನ್ಯಾಯಾಂಗ ನಿಂದನೆ ಮಾಡುತ್ತಿದ್ದೀರಿ. ನಾವು ಇಂದು ನೀಡುತ್ತಿರುವ ಆದೇಶವನ್ನೂ ಪಾಲಿಸದೇ ಹೋದಲ್ಲಿ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು. ನಾವು ಈಗಲೇ ಅಂಥ ಕ್ರಮವನ್ನೇನು ತೆಗೆದುಕೊಳ್ಳುತ್ತಿಲ್ಲ. ಆದರೆ ಉದ್ದೇಶಪೂರ್ವಕವಾಗಿ ನಮ್ಮ ಆದೇಶವನ್ನು ಪಾಲಿಸದೇ ಹೋದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು SBI ಗೆ ನೇರವಾಗಿ ಎಚ್ಚರಿಕೆ ನೀಡಿದರು.

More articles

Latest article