ಫೈನಾನ್ಸ್ ಕಂಪನಿಗಳ ಕಿರುಕುಳ; ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ಪ್ರತಿಭಟನೆ ನಡೆಸಿದ ಮಹಿಳೆಯರು

Most read

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿ ಪ್ರತಿನಿಧಿಗಳ ಕಿರುಕುಳ ಹೆಚ್ಚಾಗಿದ್ದು, ತಮ್ಮ ಪತಿಯಂದಿರಿಗೆ ಬೆದರಿಕೆಗಳು ಬರುತ್ತಿವೆ ಎಂದು ಆ ಜಿಲ್ಲೆಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೈನಾನ್ಸ್‌ ಕಂಪನಿಗಳ ಕಿರುಕುಳ ತಪ್ಪಿಸಿ ಪತಿಯಂದಿರನ್ನು ರಕ್ಷಿಸಿ ನಮ್ಮ ಮಾಂಗಲ್ಯ ಉಳಿಸಬೇಕು ಎಂದು ಆಗ್ರಹಿಸಿ ಹಾವೇರಿ ನಗರದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಮಹಿಳೆಯರು, ತಮ್ಮ ಮಾಂಗಲ್ಯ ಸರದ ಸಮೇತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಕಳುಹಿಸಿ ರಕ್ಷಣೆಗೆ ಅಂಗಲಾಚಿದ್ದಾರೆ. ಇಲ್ಲಿನ ಅಂಚೆ ಕಚೇರಿ ಎದುರು ಸೇರಿದ್ದ ಮಹಿಳೆಯರು, ಫೈನಾನ್ಸ್ ಕಂಪನಿಗಳ ವಿರುದ್ಧ ಘೋಷಣೆ ಕೂಗಿ ಮನವಿ ಪತ್ರದ ಜೊತೆಯಲ್ಲಿ ಮಾಂಗಲ್ಯ ಸರವನ್ನು ಲಗತ್ತಿಸಿ, ಅಂಚೆ ಪೆಟ್ಟಿಗೆಗೆ ಹಾಕಿದರು. ರಾಣೆಬೆನ್ನೂರು ರೈತ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ರಾಣೆಬೆನ್ನೂರು ಹಾಗೂ ಇತರ ತಾಲ್ಲೂಕುಗಳಲ್ಲಿ ಸಾರ್ವಜನಿಕರಿಗೆ ಫೈನಾನ್ಸ್ ಕಂಪನಿಯವರು ಸಾಲ ನೀಡಿದ್ದಾರೆ. ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ನಿಗದಿತ ಬಡ್ಡಿ ಸಮೇತ ಹಣ ಮರಳಿಸಿದ್ದರೂ ಸಾಲ ಬಾಕಿ ಇರುವುದಾಗಿ ಹೆದರಿಸುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆ ಮೂಲಕ ನಮ್ಮನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆಪಾದಿಸಿದರು. ನಮ್ಮನ್ನೇ ನಮ್ಮ ಮನೆಗಳಿಂದ ಆಚೆ ಹಾಕುತ್ತಿದ್ದಾರೆ.  ನಮ್ಮ ಪತಿಯಂದಿರಿಗೂ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಫೈನಾನ್ಸ್ ಕಿರುಕುಳದಿಂದ ಹಲವರು ಮನೆ ಬಿಟ್ಟು ಹೋಗುತ್ತಿದ್ದಾರೆ. ಕೆಲವರು ಆತ್ಮಹತ್ಯೆಗೂ ಯತ್ನಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ. 2000 ಬರುತ್ತಿದೆ. ಈ ಹಣವನ್ನೂ ಫೈನಾನ್ಸ್ ಕಂಪನಿಯವರು ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪತಿಯಂದಿರಿಗೆ ಜೀವ ಬೆದರಿಕೆ ಇದೆ. ಅವರಿಗೆ ಏನಾದರೂ ಆದರೆ, ನಮ್ಮ ಮಾಂಗಲ್ಯವೇ ಹೋಗುತ್ತದೆ. ಹೀಗಾಗಿ, ಮಾಂಗಲ್ಯವನ್ನೇ ನಿಮಗೆ ಕಳುಹಿಸುತ್ತಿದ್ದೇವೆ. ನಮ್ಮೆಲ್ಲರ ಮಾಂಗಲ್ಯವನ್ನು ಉಳಿಸುವ ಹೊಣೆ ನಿಮ್ಮ ಮೇಲಿದೆ ಎಂದು  ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ. ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್‌ಗಳಿಗೂ ಮಹಿಳೆಯರು ಮನವಿ ಸಲ್ಲಿಸಿದ್ದಾರೆ.

More articles

Latest article