ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಸೇಷಿಸಿದೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಕಾರ್ಯಕ್ರಮವೊಂದರ ಮಾತನಾಡುತ್ತಾ ಯತೀಂದ್ರ ಸಿದ್ದರಾಮಯ್ಯ ಅವರು, ನಮ್ಮ ತಂದೆಯವರು ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಮುಂದಿನ ರಾಜಕೀಯಕ್ಕೆ ವೈಚಾರಿಕವಾಗಿ ಪ್ರಗತಿಪರ ತತ್ವ-ಸಿದ್ಧಾಂತ ಇರುವ ನಾಯಕರು ಬೇಕು. ಹೀಗಾಗಿ ಸತೀಶ್ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ. ಸತೀಶ್ ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ ಎಂಬವಿಶ್ವಾಸ ನನಗಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಪದವಿಗೆ ಅವರನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.
ಯತೀಂದ್ರ ಅವರ ಈ ಹೇಳಿಕೆಯನ್ನು ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನನ್ನ ಹತ್ತಿರ ಕೇಳಿದ್ರೆ ಏನನ್ನು ಹೇಳಲು ಸಾಧ್ಯ? ಈ ಬಗ್ಗೆ ಅವರನ್ನೇ ಕೇಳಿಕೊಳ್ಳಿ. ನನ್ನ ಬಗ್ಗೆ ಯಾರೊಬ್ಬರೂ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಾನು, ಸಿದ್ದರಾಮಯ್ಯ ಏನು ಅಂತ ಈಗಾಗಲೇ ತಿಳಿಸಿದ್ದೇವೆ. ಪಕ್ಷ ಏನನ್ನು ಹೇಳುತ್ತದೆಯೋ ಅದನ್ನು ಇಬ್ಬರೂ ಸೇರಿ ಮಾಡುತ್ತೇವೆ ಎಂದಿದ್ದಾರೆ.