IAS ನಿಂದ ಸಂಸತ್ತಿಗೆ ಹೊರಡಲು ಸಿದ್ಧವಾಗಿರುವ ಶಶಿಕಾಂತ್ ಸೆಂಥಿಲ್!

Most read

ಚೆನ್ನೈ: ಕರ್ನಾಟಕದಲ್ಲಿ ಸಿಇಒ, ಜಿಲ್ಲಾಧಿಕಾರಿಯಾಗಿ ಕೆಲವಾರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ದಕ್ಷ ಪ್ರಾಮಾಣಿಕ ಅಧಿಕಾರಿ ಎಂದು ಹೆಸರಾಗಿದ್ದ ಮಾಜಿ IAS ಅಧಿಕಾರಿ,  ಶಶಿಕಾಂತ್ ಸೆಂಥಿಲ್ ಇದೀಗ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಂದು ಕಾಂಗ್ರೆಸ್ ಪಕ್ಷವು ಶಶಿಕಾಂತ್ ಸೆಂಥಿಲ್ ಅವರನ್ನು ತಮಿಳುನಾಡಿನ ತಿರುವಳ್ಳೂರು ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 2019ರ ಸೆಪ್ಟೆಂಬರ್ ನಲ್ಲಿ ಶಶಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದರು. ಜಮ್ಮು ಕಾಶ್ಮೀರ ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆ ತಳೆದು, ಅಲ್ಲಿನ ರಾಜ್ಯದ ಸ್ಥಾನಮಾನ ಕಿತ್ತುಕೊಂಡು, ರಾಷ್ಟ್ರಪತಿ ಆಡಳಿತ ಹೇರಿ, ಸಂವಿಧಾನ ಮೂಲಕ ಕಾಶ್ಮೀರಿಗಳು ಪಡೆದಿದ್ದ ಹಕ್ಕುಗಳನ್ನು ಬಿಜೆಪಿ ಸರ್ಕಾರವು ನಿರಾಕರಿಸಿದ ಸಂದರ್ಭದಲ್ಲಿ ಶಶಿಕಾಂತ್ ಸೆಂಥಿಲ್ ಅವರ ರಾಜೀನಾಮೆ ದೇಶದ ಗಮನ ಸೆಳೆದಿತ್ತು.

ತಕ್ಷಣದಲ್ಲಿ ಯಾವುದೇ ರಾಜಕೀಯ ಪಕ್ಷ ಸೇರಿರದಿದ್ದರೂ 2020ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ತಮಿಳುನಾಡಿನ ರಾಜ್ಯ ಕಾಂಗ್ರೆಸ್ ಉಪಾಧ್ಯಕರಾಗಿ ನೇಮಕಗೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ರಾಜ್ಯದ  ಚುನಾವಣಾ ವಾರ್ ರೂಮ್ ಉಸ್ತುವಾರಿ ವಹಿಸಿಕೊಂಡಿದ್ದರು. ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಕರ್ನಾಟಕದ ಮನೆಮನೆಗೆ ತಲಿಪಿಸುವಲ್ಲಿ ಶಶಿಕಾಂತ್ ಸೆಂಥಿಲ್ ಪಾತ್ರ ಪ್ರಮುಖವಾಗಿತ್ತು. ನಂತರ ತೆಲಂಗಾಣ ಚುನಾವಣೆಯಲ್ಲೂ ಪ್ರಮುಖ ಪಾತ್ರವಹಿಸಿದ್ದರು.  ರಾಜಾಸ್ತಾನ ಚುನಾವಣೆಯಲ್ಲಿಯೂ ಕಾಂಗ್ರೆಸ್ ವಾರ್ ರೂಮ್ ಉಸ್ತುವಾರಿ ವಹಿಸಿಕೊಂಡಿದ್ದರು.

ಶಶಿಕಾಂತ್ ಸೆಂಥಿಲ್ ಹಿನ್ನೆಲೆ:

ಚೆನ್ನೈನಲ್ಲಿ ಜನಿಸಿದ್ದ ಶಶಿಕಾಂತ್ ಸೆಂಥಿಲ್ ತಿರುಚಿರಾಪಳ್ಳಿ ರೀಜನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಓದಿದ್ದರು. ನಂತರ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿ ಉಪನ್ಯಾಸಕರಾಗಿ ವೃತ್ತಿ ನಡೆಸಿದ್ದರು. ಈ ಸಂದರ್ಭದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಟಾಪ್ ರ್ಯಾಂಕಿಂಗ್ ಪಡೆದು ಕರ್ನಾಟಕ ಕೇಡರ್ ಆಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯದ ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೆಲುಮಾತಿನ, ಜನಾನುರಾಗಿ ಸ್ವಭಾವದ ಶಶಿಕಾಂತ್ ಸೆಂಥಿಲ್ ಜನಪ್ರಿಯತೆಗಾಗಿ ಎಂದೂ ಕೆಲಸ ಮಾಡಿದವರಲ್ಲ. ಆದರೆ ಅಧಿಕಾರವನ್ನು ಜನರಿಗೆ ಅನುಕೂಲ ಮಾಡಿಕೊಡಲು ಸದಾ ತುಡಿಯುತ್ತಿದ್ದರು. ಶಶಿಕಾಂತ್ ಸೆಂಥಿಲ್ ಅಧಿಕಾರಿಯಾಗಿದ್ದಾಗ ಎಲ್ಲರಿಂದ ಮೆಚ್ಚುಗೆಗೆ ಒಳಗಾಗಿದ್ದ ವಿಷಯವೇನೆಂದರೆ ಅವರು ಯಾವುದೇ ಪಕ್ಷಕ್ಕೆ ಪಕ್ಷಪಾತಿಯಾಗಿ ವರ್ತಿಸುತ್ತಿರಲಿಲ್ಲ. ಸಂವಿಧಾನ ಮತ್ತು ಕಾನೂನಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದರು. ಯಾವುದೇ ಪಕ್ಷದ ಯಾರಿಗೂ ಕೇರ್ ಮಾಡದೇ ನಿಷ್ಠೆಯಿಂದ ಕೆಲಸ ಮಾಡಿದ್ದ ಕಾರಣಕ್ಕೆ ಅವರ ಮೇಲೆ ಯಾವುದೇ ದೂರುಗಳಿರಲಿಲ್ಲ.

‘ಕೇಂದ್ರದಲ್ಲಿರುವ ಬಿಜೆಪಿ ಫ್ಯಾಸಿಸ್ಟ್ ಆಗಿ, ಮೆಜಾರಿಟೇರಿಯನ್ ಆಗಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಈ ಸಂದರ್ಭದಲ್ಲಿ ನಾನು ಅಧಿಕಾರಿಯಾಗಿ ಕೆಲಸ ಮಾಡುವುದಕ್ಕಿಂತಲೂ ಈ ವ್ಯವಸ್ಥೆಯನ್ನು ಬದಲಿಸುವ ಅಗತ್ಯವಿದೆ ಎನಿಸಿ ರಾಜೀನಾಮೆ ನೀಡಿದ್ದೇನೆ’ ಎಂದಿದ್ದ ಶಶಿಕಾಂತ್ ಸೆಂಥಿಲ್ ರಾಹುಲ್ ಗಾಂಧಿಯವರ ಜೊತೆ ಒಡನಾಟ ಬೆಳೆಸಿಕೊಂಡಿದ್ದರು. ‘ರಾಹುಲ್ ಗಾಂಧಿಯಂತ ನಾಯಕನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವುದರಲ್ಲಿ ಸಂತೋಷವಿದೆ’ ಎಂದು ಹೇಳಿದ್ದರು.

ಇದೀಗ ತಿರುವಳ್ಳೂರು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಶಶಿಕಾಂತ್ ಸೆಂಥಿಲ್ ತಮಗೆ ಟಿಕೆಟ್ ಸಿಗುವ ಸೂಚನೆ ಸಿಗುತ್ತಿದ್ದಂತೆ ತಮ್ಮ ಎಕ್ಸ್ ಖಾತೆಯಲ್ಲಿ ‘ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶ್ರೀ ರಾಹುಲ್ ಗಾಂಧಿ, ಶ್ರೀಮತಿ ಸೋನಿಯಾ ಗಾಂಧಿ ಮತ್ತು ತಮಿಳುನಾಡು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಶ್ರೀ. ಸೆಲ್ವಪೆರುಂಡಗೈ ಶಾಸಕರಿಗೆ ಮತ್ತು ಎಲ್ಲಾ ಉನ್ನತ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ರಾಷ್ಟ್ರದ ಹಿತಕ್ಕಾಗಿ ದೊಡ್ಡ ಜನಬೆಂಬಲದೊಂದಿಗೆ ಚುನಾವಣಾ ಗೆಲುವು ಪಡೆದು ಪಕ್ಷದ ನಾಯಕತ್ವಕ್ಕೆ ಸಲ್ಲಿಸಲು ಪಣ ತೊಡೋಣ!!’ ಎಂದು ಟ್ವೀಟ್ ಮಾಡಿದ್ದರು.

ಐಎಎಸ್ ಹುದ್ದೆಯನ್ನೇ ತೊರೆದು ರಾಜಕಾರಣ ಪ್ರವೇಶ ಮಾಡಿರುವ ಶಶಿಕಾಂತ್ ಸೆಂಥಿಲ್ ಇದೀಗ ದೆಹಲಿಯ ಸಂಸತ್ತಿಗೆ ಪಾದಾರ್ಪಣೆ ಮಾಡಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ರಾಜೀನಾಮೆ ನೀಡಿ, ಬಿಜೆಪಿ ಸೇರಿಕೊಂಡಿರುವ ಅಣ್ಣಾಮಲೈ ಅವರನ್ನು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಇವರಿಬ್ಬರ ಚುನಾವಣಾ ಸ್ಪರ್ಧೆಗಳೂ ವಿಶೇಷವಾಗಿ ಗಮನ ಸೆಳೆಯುತ್ತಿವೆ.

More articles

Latest article