ಬೆಂಗಳೂರು: ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಮರಳು ನೀತಿ ಜಾರಿಗೊಳಿಸಿದ್ದು, ಆಯವ್ಯಯದಲ್ಲಿ ಘೋಷಿಸಿರುವಂತೆ ಈ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರದ ಮರಳು ನೀತಿಯಂತೆ ಈಗಾಗಲೇ ಸಾರ್ವಜನಿಕ ಹಾಗೂ ಸ್ಥಳೀಯ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಕಡಿಮೆ ಬೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಪೂರೈಸಲು I, II ಮತ್ತು III ನೇ ಶ್ರೇಣಿಯ ಹಳ್ಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಿ, ಪ್ರತಿ ಮೆ.ಟನ್ ಮರಳಿನ ಮಾರಾಟ ಬೆಲೆಯನ್ನು ರೂ.300/-ಗಳನ್ನು ನಿಗದಿಪಡಿಸಲಾಗಿದೆ ಮತ್ತು ಸದರಿ ವ್ಯವಸ್ಥೆಯು ಪ್ರಸ್ತುತ ಜಾರಿಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
IV, V ಮತ್ತು ಉನ್ನತ ಶ್ರೇಣಿಗಳ ಹಳ್ಳ / ನದಿಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್ ಗಳನ್ನು ಸರ್ಕಾರದಿಂದ ಅಧಿಸೂಚಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಸರ್ಕಾರಿ ಇಲಾಖೆಗಳಿಗೆ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಇದೆ ರೀತಿ ಸಾರ್ವಜನಿಕ/ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಮೂಲಕ ಮರಳು ಬ್ಲಾಕ್‌ಗಳನ್ನು ವಿಲೇಪಡಿಸುವ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದಿದ್ದಾರೆ.
ಈ ನೂತನ ನೀತಿಯಂತೆ ಮರಳು ಬ್ಲಾಕ್‌ಗಳ ಟೆಂಡರ್‌ನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ನಡೆಸಲಾಗುವುದು. ಜಿಲ್ಲಾವಾರು ಗುರುತಿಸಲಾಗುವ ಮರಳು ಬ್ಲಾಕ್‌ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಇತರೆ ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಡಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ರತಿ ಮೆ.ಟನ್ ಮರಳು ಏಕ ರೂಪ ಮಾರಾಟ ದರ ರೂ. 850/- ನ್ನು ನಿಗದಿಪಡಿಸಲಾಗಿದೆ. ಸರ್ಕಾರವು ನಿಗದಿಪಡಿಸುವ ಮಾರಾಟ ಬೆಲೆಯ ಮೊತ್ತದ ಶೇಕಡ 50 ರಷ್ಟುನ್ನು Ceiling price ಎಂದು ಹಾಗೂ Ceiling Price ನ ಶೇಕಡ 60ರಷ್ಟನ್ನು Cut-off Price ಎಂದು ನಿಗದಿಪಡಿಸಲಾಗಿರುತ್ತದೆ. Ceiling Price ಮತ್ತು Cut-off Price ಗೆ ಸಮನಾದ ಅಥವಾ ನಡುವೆ ಸಲ್ಲಿಸುವ ಕಡಿಮೆ ಟೆಂಡರ್ ಮೊತ್ತವನ್ನು ನಮೂದಿಸಿದವರನ್ನು ಯಶಸ್ವಿ ಬಿಡ್ಡುದಾರರೆಂದು ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚು ಟೆಂಡರ್‌ದಾರರು ಏಕ ರೂಪ ಟೆಂಡರ್ ದರವನ್ನು ನಮೂದಿಸಿದಲ್ಲಿ ಲಾಟರಿ ಮೂಲಕ ಯಶಸ್ವಿ ಬಿಡ್ಡುದಾರನನ್ನು ಆಯ್ಕೆ ಮಾಡಲಾಗುವುದು. ಟೆಂಡರ್ ಪ್ರಕ್ರಿಯೆಯನ್ನು e-Portal ನಲ್ಲಿ ನಡೆಸಲಾಗುತ್ತಿದ್ದು, ಸದರಿ Portal ಮೂಲಕ ಆಸಕ್ತ ವ್ಯಕ್ತಿ/ಖಾಸಗಿ ಕಂಪನಿ/ಸಂಸ್ಥೆಯವರು ಅರ್ಜಿ ಸಲ್ಲಿಸಲು ಜಿಲ್ಲಾವಾರು ಅಧಿಸೂಚನೆ ಜಾರಿ ಮಾಡಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಈ ಸಂಬಂಧ ಸರ್ಕಾರದಿಂದ ಮಾರ್ಗಸೂಚಿ ಮತ್ತು ಟೆಂಡರ್ ಡಾಕ್ಯುಮೆಂಟ್ ನ್ನು ಎಲ್ಲಾ ಜಿಲ್ಲಾ ಕಛೇರಿಗಳಿಗೆ ನೀಡಲಾಗಿದ್ದು, ಸರ್ಕಾರದಿಂದ ಜಾರಿ ಮಾಡಿರುವ ಮರಳು ನೀತಿಯನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ನಿರ್ದೇಶಿಸಲಾಗಿದೆ ಎಂದು ಗಣಿ ಸಚಿವರು ತಿಳಿಸಿದ್ದಾರೆ.