ಸಕಲೇಶಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಪತ್ ಅಲಿಯಾಸ್ ಶಂಭು ಶವವಾಗಿ ಪತ್ತೆಯಾಗಿದ್ದಾನೆ. ಈತನ ಶವ ತಾಲೂಕಿನ ಯಸಳೂರು ಹೋಬಳಿಯ ಮಾಗೇರಿ ಸಮೀಪದ ಕಲ್ಲಹಳ್ಳಿ ಗ್ರಾಮದ ಬಳಿ ಪ್ರಪಾತದಲ್ಲಿ ಪತ್ತೆಯಾಗಿದೆ. ಸಂಪತ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಕ್ಕೆಹೊಳೆ ಜಂಗ್ಲನ್ ನಿವಾಸಿ ಎಂದು ತಿಳಿದು ಬಂದಿದೆ. ಶಂಭು ತನ್ನ ಗೆಳೆಯನ ಕಾರನ್ನು ತೆಗದುಕೊಂಡು ಹೋಗಿದ್ದ. ಈ ಕಾರು ಕಳೆದ ಶನಿವಾರ ಯಸಳೂರು ಸಮೀಪದ ಪ್ರದೇಶದಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದವು. ತನಿಖೆ ನಡೆಸಿದ ಪೊಲೀಸರು ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಸಂಪತ್ ಶವವನ್ನು ಪತ್ತೆ ಹಚ್ಚಿದ್ದಾರೆ.
ಅಪರಿಚಿತರು ಸಂಪತ್ ನನ್ನು ಬರ್ಬರವಾಗಿ ಕೊಚ್ಚಿ ಹತ್ಯೆಗೈದು, ಶವವನ್ನು ಕಾರಿನಲ್ಲಿ ತಂದು ಪ್ರಪಾತದಲ್ಲಿ ಬಿಸಾಡಿದ್ದಾರೆ. ಕೆಲವು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಈತನೂ ಒಬ್ಬ ಆರೋಪಿಯಾಗಿದ್ದ.
ಏಪ್ರಿಲ್ 9 ರಂದು ಕುಶಾಲನಗರದ ಗೆಳೆಯರೊಬ್ಬರಿಂದ ಸಂಪತ್ ತೆಗೆದುಕೊಂಡು ಹೋಗಿದ್ದ. ಈ ಕಾರು, ಏಪ್ರಿಲ್ 10ರಂದು ಕಲ್ಲಹಳ್ಳಿಯಲ್ಲಿ ನಿಂತಿತ್ತು. ಶನಿವಾರ ಬೆಳಿಗ್ಗೆ ಗ್ರಾಮಸ್ಥರು ಸಂಶಯಾಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಬಳಿಕ, ತೋಟದ ಕಾರ್ಮಿಕರನ್ನು ಕರೆತಂದು ಪರಿಶೀಲಿಸಿದ್ದಾರೆ. ಅವರಲ್ಲಿ ಒಬ್ಬ ಕಾರಿನಲ್ಲಿ ರಕ್ತದ ಕಲೆಗಳು ಇರುವುದನ್ನು ಪತ್ತೆಹಚ್ಚಿದ್ದ. ನಂತರ ಯಸಳೂರು ಠಾಣೆಗೆ ದೂರು ನೀಡಲಾಗಿತ್ತು.
ಘಟನೆ ನಡೆದ ಸ್ಥಳಕ್ಕೆ ಸರ್ಕಲ್ ಇನ್ ಸ್ಪೆಕ್ಟರ್ ಹಾಗೂ ಎಸ್‌ಐ ಶ್ರೀನಿವಾಸ್ ನೇತೃತ್ವದ ಪೊಲೀಸ್ ತಂಡ, ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ತೆರಳಿ ತಪಾಸಣೆ ನಡೆಸಿತ್ತು. ಈ ಕಾರು ಕುಶಾಲನಗರದ ವ್ಯಾಪಾರಿ ಜಾನ್ ಅವರದ್ದು ಎನ್ನುವುದು ಖಚಿತವಾಗಿದೆ. ಸಂಪತ್ ಆ ಕಾರನ್ನು ತೆಗೆದುಕೊಂಡು ಹೊದ ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಕುಶಾಲನಗರ ಠಾಣೆಯಲ್ಲಿ ಸಂಪತ್ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇತ್ತ ಯಸಳೂರು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ನಾಲ್ಕು ದಿನಗಳ ಶೋಧದ ಬಳಿಕ ಶವ ಪತ್ತೆಯಾಗಿದೆ. ಬೇರೆ ಎಲ್ಲೋ ಕೊಲೆ ಮಾಡಿ ಮಲೆನಾಡು ಪ್ರದೇಶದಲ್ಲಿ ಶವವನ್ನು ಬಿಸಾಕಿ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಸಂಪತ್ ಈ ಹಿಂದೆ ಹಲವಾರು ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತಾದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಕೈಗೊಂಡಿದ್ದರು. ಈಗ ಶವ ಪತ್ತೆಯಾಗಿದ್ದು ಪ್ರಕರಣವು ಹೊಸ ತಿರುವು ಪಡೆದಿದೆ. ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಮುಂದುವರೆಸಿದ್ದಾರೆ.