ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗುಜರಾತ್ ನ ವಡೋದರಾ ಜಿಲ್ಲೆಯ ಗ್ರಾಮವೊಂದರಲ್ಲಿ ಈ ವ್ಯಕ್ತಿಯನ್ನು ಪತ್ತೆ ಮಾಡಲಾಗಿದ್ದು ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಸಂಚಾರಿ ಪೊಲೀಸರ ವಾಟ್ಸ್ ಆ್ಯಪ್ ಸಹಾಯವಾಣಿಗೆ ಭಾನುವಾರ ಬೆದರಿಕೆ ಸಂದೇಶವೊಂದನ್ನು ಕಳುಹಿಸಿ ನಟ ಸಲ್ಮಾನ್ ಖಾನ್ ಅವರ ಕಾರು ಸ್ಪೋಟಿಸುವುದಾಗಿ ಮತ್ತು ಅವರ ಬಾಂದ್ರಾ ಮನೆಗೆ ನುಗ್ಗಿ ಅವರನ್ನು ಹೊಡೆಯುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಪ್ರಕರಣ ಸಂಬಂಧ ಮುಂಬೈನ ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಜತೆಗೆ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಆರೋಪಿ ಪತ್ತೆಗೆ ತನಿಖೆ ನಡೆಸಿದಾಗ ಗುಜರಾತ್ ನ ವಡೋದರಾದ ವಾಘೋಡಿಯಾ ತಾಲೂಕಿನ ವ್ಯಕ್ತಿಯೊಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎನ್ನುವುದು ತಿಳಿದು ಬಂದಿತ್ತು. ವಾಘೋಡಿಯಾ ಪೊಲೀಸರೊಂದಿಗೆ ಮುಂಬೈ ಪೊಲೀಸರ ತಂಡವು ಸೋಮವಾರ ಶಂಕಿತನ ಮನೆಗೆ ಬಂಧಿಸಲು ತೆರಳಿದ್ದಾರೆ. ಆದರೆ ಸಂದೇಶ ಕಳುಹಿಸಿದ 26 ವರ್ಷದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಹೇಳಿಕೆ ನೀಡಿದ್ದಾರೆ.