ಬೆಳಗಾವಿ: ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ ಕಾರ್ಮಿಕರಿಗೆ ಪಾಲಿಕೆಗಳಿಂದಲೇ ವೇತನವನ್ನು ನೇರವಾಗಿ ಪಾವತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 13 ಮಹಾನಗರ ಪಾಲಿಕೆಗಳಲ್ಲಿನ ಕಾರ್ಮಿಕರಿಗೆ ಪಾಲಿಕೆಗಳೇ ನೇರವಾಗಿ ವೇತನ ಪಾವತಿಸಬೇಕೆಂಬುದು ನಮ್ಮ ಸರ್ಕಾರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಲ್ಲಿಂದ ಒಪ್ಪಿಗೆ ಸಿಕ್ಕರೆ ಎಲ್ಲರಿಗೂ ನೇರವಾಗಿ ವೇತನವನ್ನು ಪಾವತಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಎಲ್ಲಾ ಮಹಾನಗರಪಾಲಿಕೆಗಳಲ್ಲಿ 30 ಸಾವಿರಕ್ಕೂ ಅಧಿಕ ಕಾರ್ಮಿಕರು ಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಖಾಯಂಗೊಳಿಸುವ ಬಗ್ಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ. ಇಲಾಖೆಗೆ ಆರ್ಥಿಕ ಹೊರೆ ಹೆಚ್ಚಾಗುವುದರಿಂದ ಇವರೆಲ್ಲರನ್ನೂ ಖಾಯಂಗೊಳಿಸಲು ಸಾಧ್ಯವಾಗುವುದಿಲ್ಲ. ಆರ್ಥಿಕ ಒಪ್ಪಿಗೆ ಸೂಚಿಸಿದರೆ ಅದನ್ನು ಜಾರಿಗೆ ತರಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದ ಅವರು, ಕಾರ್ಮಿಕರ ಹಿತ ಕಾಯ್ದುಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ತಾರತಮ್ಯವಿಲ್ಲದೇ ಎಲ್ಲಾ ಪಾಲಿಕೆಗಳಿಗೆ ಅನುದಾನ:
ಬಿಜೆಪಿಯ ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸುರೇಶ್ ಅವರು, ಮಂಗಳೂರು ಮಹಾನಗರ ಪಾಲಿಕೆಗೆ ಎಸ್ ಎಫ್ ಸಿ ಮುಕ್ತನಿಧಿಯಡಿ 2022-23 ನೇ ಸಾಲಿನಲ್ಲಿ 609.80 ಲಕ್ಷ ರೂಪಾಯಿಗಳು, 2023-24 ನೇ ಸಾಲಿನಲ್ಲಿ 724.60 ಲಕ್ಷ ರೂಪಾಯಿಗಳು
2024-25 ರಲ್ಲಿ 692 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಅದೇ ರೀತಿಯಲ್ಲಿ ಎಸ್ ಎಫ್ ಸಿ ಕುಡಿಯುವ ನೀರು ಯೋಜನೆಯಡಿ ಕ್ರಮವಾಗಿ 9.50 ಲಕ್ಷ, 9.04 ಲಕ್ಷ ಮತ್ತು 10 ಲಕ್ಷ ರೂಪಾಯಿಗಳು ಹಾಗೂ ಎಸ್ ಎಫ್ ಸಿ ವಿಶೇಷ ಅನುದಾನದ ರೂಪದಲ್ಲಿ 193.40 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
15 ನೇ ಹಣಕಾಸು ಆಯೋಗದ ಅನುದಾನದಿಂದ ಮಂಗಳೂರು ಮಹಾನಗರಪಾಲಿಕೆಗೆ ಕಳೆದ ಮೂರು ವರ್ಷಗಳಲ್ಲಿ 4495.87 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುವ ಮೂಲಕ ಮಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
13 ಮಹಾನಗರ ಪಾಲಿಕೆಗಳ ಪೈಕಿ 12 ಮಹಾನಗರಪಾಲಿಕೆಗಳಿಗೆ ಒಟ್ಟು 2400 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ. ಈ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಕಾಮಗಾರಿಗಳು ಮುಗಿದ ತಕ್ಷಣವೇ ಹಣವನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ವಿಮೆ ಪಾವತಿಗೆ ಕ್ರಮ:
ವಾಹನಗಳ ವಿಮೆ ಇಲ್ಲದೇ ಕಸದ ಲಾರಿ ಸೇರಿದಂತೆ ಇನ್ನಿತರ ವಾಹನಗಳನ್ನು ಓಡಿಸಲಾಗುತ್ತಿದೆ. ಇದರಿಂದ ಚಾಲಕರಿಗೆ ತೊಂದರೆ ಆಗಲಿದೆ ಎಂಬ ಸದಸ್ಯರ ಆತಂಕಕ್ಕೆ ಸ್ಪಷ್ಟನೆ ನೀಡಿದ ಸಚಿವರು, ತತ್ ಕ್ಷಣವೇ ವಾಹನಗಳಿಗೆ ವಿಮೆ ಪಾವತಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

