ಬೆಂಗಳೂರು: ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಯೋಜನೆಗೊಂಡಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಬಯೋ ಮೆಟ್ರಿಕ್ ಆಧಾರದಲ್ಲಿಯೇ ಸಂಬಳ ಪಾವತಿ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಸ್ಪತ್ರೆಗಳಲ್ಲಿ ಸಂಯೋಜನೆಗೊಂಡಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ. ಹಿರಿಯ ವೈದ್ಯರುಗಳು, ಜ್ಯೂನಿಯರ್ ಡಾಕ್ಟರ್‌ಗಳಿಗೆ ಜವಾಬ್ದಾರಿ ಕೊಟ್ಟು ಅವರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಹೋಗುತ್ತಾರೆ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂತಹ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಮತ್ತು ಶಿವಮೊಗ್ಗದಲ್ಲಿ 100 ಬೆಡ್ ನ ಪ್ರತ್ಯೇಕ ಜಿಲ್ಲಾಸ್ಪತ್ರೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಶರಣ್ ಪ್ರಕಾಶ್ ಪಾಟೀಲ್ ಉತ್ತರಿಸಿ , ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಇರಬೇಕು ಎಂದು ಆದೇಶ ಮಾಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಯಾವುದೇ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಹಾಗಿಲ್ಲ ಎಂದು ಆದೇಶ ಮಾಡಲಾಗಿದೆ. ಹಾಜರಾತಿಗಾಗಿ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಬಯೋ ಮೆಟ್ರಿಕ್ ಅಳವಡಿಕೆ ಮಾಡಲಾಗಿದೆ. ವೈದ್ಯರು ದಿನಕ್ಕೆ 4 ಬಾರಿ ಬಯೋ ಮೆಟ್ರಿಕ್ ಮಾಡಬೇಕು. ಮುಂದಿನ ದಿನಗಳಲ್ಲಿ ಬಯೋ ಮೆಟ್ರಿಕ್ ಆಧಾರದಲ್ಲಿ ಸಂಬಳ ಬಿಡುಗಡೆ ಮಾಡುವ ವ್ಯವಸ್ಥೆ ಜಾರಿಗೆ ನಿರ್ಧಾರ ಮಾಡಲಾಗುವುದು ಎಂದು ಭರವಸೆ ನೀಡಿದರು.