ಸಕಲೇಶಪುರ: ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ, ನಾಲ್ವರ ವಿರುದ್ಧ ಪ್ರಕರಣ ದಾಖಲು

Most read

ಸಕಲೇಶಪುರ : ಇಲ್ಲಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಟ್ಲ ಬೆಟ್ಟದಲ್ಲಿ ಬೈಕ್‌ನಲ್ಲಿ ಬಂದ ಪ್ರವಾಸಿಗರ ಮೇಲೆ ಹಲ್ಲೆ ಸ್ಥಳೀಯ ಫೋರ್ ವೀಲ್ ಜೀಪ್ ಚಾಲಕರು ಹಲ್ಲೆ ನಡೆಸಿರುವ ಘಟನೆ‌ ನಡೆದಿದೆ.

ಹಲ್ಲೆ ಆರೋಪದ ಮೇಲೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಲ್ಲೂಕಿನ ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟದಲ್ಲಿ ಜೂನ್ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೊಕ್ಕೋಟು ಊರಿನ ಪ್ರವಾಸಿಗರಾದ ಭುವಿತ್ ಪೂಜಾರಿ ಹಾಗೂ ಎಂಟು ಸಂಗಡಿಗರು ತಮ್ಮ ಬೈಕ್ ಗಳಲ್ಲಿ ಪಟ್ಲ ಬೆಟ್ಟಕ್ಕೆ ಹೋಗಿ ಹಿಂತಿರುಗಿ ಬರುವಾಗ ಈ ಘಟನೆ ನಡೆದಿದೆ.

ಬೈಕ್ ಸವಾರರಿಗೆ ಬಾಡಿಗೆ ಜೀಪುಗಳ ಚಾಲಕರು ಹಾಗೂ ಮಾಲೀಕರ ತಂಡ ಬೈಕ್‌ಗಳಲ್ಲಿ ಹೋಗಬೇಡಿ ಅಂದ್ರು ಯಾಕೆ ಹೋದ್ರಿ ಇಲ್ಲಿಗೆ ಬಾಡಿಗೆ ಜೀಪಿನಲ್ಲೇ ಹೋಗಬೇಕು ಬೇರೆ ವಾಹನಗಳನ್ನು ಬಿಡುವುದಿಲ್ಲ ಎಂದು ಬೈಕ್ ಸವಾರರ ಜೊತೆ ಮಾತಿನ ಚಕಾಮುಕಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಏಕಾಎಕಿ ಬೈಕ್ ಸವಾರ ಭುವಿತ್ ಪೂಜಾರಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಳು ಭುವಿತ್ ಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಸಕಲೇಶಪುರ ತಾಲೂಕಿನ ಪತ್ರಕರ್ತರು ಪಟ್ಲ ಬೆಟ್ಟ ನೋಡಲು ವಾಹನ ನಿಲ್ಲಿಸಿ ಬೆಟ್ಟ ನೋಡಿ ಹಿಂದಿರುಗಿ ಬರುವಷ್ಟರಲ್ಲಿ ಎರಡು ವಾಹನದ ಚಕ್ರವನ್ನು ಆಯುಧದಿಂದ ಕತ್ತರಿಸಿ ವಾಹನವನ್ನು ಜಖಮ್ ಮಾಡಲಾಗಿತ್ತು.

ಈ ಊರಿನ ಕೆಲವು ಕಿಡಿಗೇಡಿಗಳು ನಿರಂತರವಾಗಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸದಿದ್ದರೆ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುವುದು ಖಂಡಿತ ಎಂಬ ಮಾತುಗಳು ಕೇಳಿಬಂದಿವೆ.

More articles

Latest article