ಮುಂಬೈ: ಮನೆಯಲ್ಲಿ ಕಳ್ಳತನ ಮಾಡಲು ಆಗಮಿಸಿದ್ದ ದುಷ್ಕರ್ಮಿಯೊಬ್ಬ ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಮುಂಬೈನ ಪಶ್ಚಿಮ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ನಿವಾಸದಲ್ಲಿ ಮಧ್ಯರಾತ್ರಿ 2.30 ರ ಸುಮಾರಿಗೆ ಈ ದುರಂತ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮನೆಯಲ್ಲಿದ್ದವರು ಎಚ್ಚರಗೊಂಡ ನಂತರ ದರೋಡೆಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಫ್ ಅಲಿ ಖಾನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಕೂಡಾ ತನಿಖೆಗೆ ಕೈಜೋಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ಸೈಫ್ ಅಲಿ ಖಾನ್ ಅವರನ್ನು ಮುಂಜಾನೆ 3.30 ಕ್ಕೆ ಆಸ್ಪತ್ರೆಗೆ ಕರೆತರಲಾಗಿದೆ. ಸೈಫ್ ಅವರಿಗೆ 2 ಕಡೆ ಚಾಕುವಿನಿಂದ ಆಳವಾಗಿ ಇರಿಯಲಾಗಿದೆ. ದಾಳಿಯಲ್ಲಿ ಅವರ ಕುತ್ತಿಗೆ, ಎಡ ಮಣಿಕಟ್ಟು, ಎದೆಗೆ ಗಾಯಗಳಾಗಿದ್ದು, ಬೆನ್ನಿನಿಂದ ಚಾಕುವಿನ ಸಣ್ಣ ಭಾಗವನ್ನು ತೆಗೆಯಲಾಗಿದೆ. ಬೆನ್ನುಹುರಿಗೆ ಪೆಟ್ಟಾದ ಕಾರಣ ತುರ್ತು ಆಪರೇಷನ್ ಮಾಡಬೇಕಾಯಿತು ಎಂಬ ಮಾಹಿತಿ ಇದೆ. ಬೆನ್ನುಮೂಳೆ ಸೇರಿದಂತೆ ಆರು ಭಾಗಗಳಲ್ಲಿ ಗಾಯಗಳಾಗಿವೆ. ಸದ್ಯ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಯಾವುದೇ ಪರಾಣಾಪಾಯ ಇಲ್ಲ ಎಂದು ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಹೇಳಿದ್ದಾರೆ.