ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆ.ಎಸ್.ಆರ್.ಟಿ.ಸಿ) ಬಸ್ ಗಳಲ್ಲಿ ಪ್ರಯಾಣಿಸುವಾಗ ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಅಗತ್ಯವಿರುವ ಹಲವಾರು ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ಸುರಕ್ಷತಾ ವ್ಯವಸ್ಥೆಗಳು ಮತ್ತು ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಮಾಹಿತಿ ನೀಡಲಾಗಿದೆ.
ಕೆ.ಎಸ್.ಆರ್.ಟಿ.ಸಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಅರಾಮದಾಯಕ ಪ್ರಯಾಣವನ್ನು ಒದಗಿಸಲು ಬದ್ಧವಾಗಿದೆ. ಪ್ರಯಾಣಿಕರ ಜಾಗೃತೆ ಮತ್ತು ಸಹಕಾರದಿಂದ ಎಲ್ಲರಿಗೂ ಸುರಕ್ಷಿತ ಪ್ರಯಾಣ ಸಾಧ್ಯ. ಕೆ.ಎಸ್. ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಸ್ ಗಳಲ್ಲಿ ಅಗ್ನಿ ಅನಾಹುತ ಸಂಭವಿಸಿ ದುರಂತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಅನುಸರಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಕ್ರಮಗಳು:
ಎಲ್ಲಾ ಬಸ್ಸುಗಳ ಒಳಭಾಗದಲ್ಲಿ ಪ್ಯಾನಿಕ್ ಬಟನ್ ಗಳನ್ನು ಅಳವಡಿಸಲಾಗಿದೆ. ಅಗ್ನಿ ಅವಘಡ, ವೈದ್ಯಕೀಯ ತುರ್ತು ಪರಿಸ್ಥಿತಿ, ಪ್ರಯಾಣಿಕರ ಸುರಕ್ಷತೆಗೆ ಅಪಾಯ ಈ ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ಯಾನಿಕ್ ಬಟನ್ ಒತ್ತಬೇಕು. ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಲುಪುತ್ತದೆ.
ಅಗ್ನಿ ನಂದಕ (ಫೈರ್ ಎಕ್ಸಿಂಗ್ಲಿಷರ್):
ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಅಗ್ನಿ ನಂದಕಗಳನ್ನು ಒದಗಿಸಲಾಗಿದೆ. ಅಗ್ನಿ ಅವಘಡ ಸಂಭವಿಸಿದಲ್ಲಿ ತಕ್ಷಣ ಚಾಲಕರಿಗೆ ಮಾಹಿತಿ ನೀಡಬೇಕು. ತರಬೇತಿ ಪಡೆದಿದ್ದರೆ ಅಗ್ನಿ ನಂದಕವನ್ನು ಸಿಬ್ಬಂದಿಯ ಸೂಚನೆಗಳನ್ನು ಶಾಂತವಾಗಿ ಅನುಸರಿಸಬೇಕು.
ತುರ್ತು ನಿರ್ಗಮನ ದ್ವಾರ:
ತುರ್ತು ನಿರ್ಗಮನ ದ್ವಾರಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಸಾಮಾನ್ಯ ಬಾಗಿಲುಗಳು ತೆರೆಯಲು ಆಗದಿದ್ದಾಗ ಅಥವಾ ಸೂಚನೆ ದೊರೆತಾಗ ಮಾತ್ರ ತುರ್ತು ನಿರ್ಗಮನ ದ್ವಾರವನ್ನು ಬಳಸಬೇಕು. ತುರ್ತು ನಿರ್ಗಮನ ದ್ವಾರವನ್ನು ಸಿಬ್ಬಂದಿ ಅಥವಾ ಪ್ರಯಾಣಿಕರು ಲಗೇಜ್ ಗಳಿಂದ ಮುಚ್ಚಬಾರದು.
ತುರ್ತು ಹ್ಯಾಮರ್ (ಸುತ್ತಿಗೆ):
ಬಸ್ಸುಗಳಲ್ಲಿ ಕಿಟಕಿಗಳ ಬಳಿ ತುರ್ತು ಹ್ಯಾಮರ್ ಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಕಿಟಕಿಯ ಗಾಜನ್ನು ಒಡೆಯಲು ಬಳಸಬೇಕು. ಗಾಜು ಸುಲಭವಾಗಿ ಒಡೆಯಲು ಅದರ ಮೂಲೆ ಭಾಗದಲ್ಲಿ ಹೊಡೆಯಬೇಕು.
ಪ್ರಯಾಣಿಕರ ಸುರಕ್ಷತಾ ಸೂಚನೆಗಳು:
ಬಸ್ ಚಲಿಸುತ್ತಿರುವಾಗ ಅಸನದಲ್ಲೇ ಕುಳಿತುಕೊಳ್ಳಬೇಕು, ಸಿಬ್ಬಂದಿಯಿಂದ ನೀಡಲಾಗುವ ಸೂಚನೆಗಳನ್ನು ಅನುಸರಿಸಬೇಕು. ತುರ್ತು ಸಂದರ್ಭಗಳಲ್ಲಿ ಮಕ್ಕಳು, ವೃದ್ಧರು ಹಾಗೂ ಅಂಗವಿಕಲರಿಗೆ ಸಹಾಯ ಮಾಡಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಾಲಕರಿಗೆ ಮಾಹಿತಿ ನೀಬೇಕು. ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರೊಂದಿಗೆ ಸಹಕರಿಸಬೇಕು.

