ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲೂ ಪರ್ಯಾಯ ಇಂಧನ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೂತನ ಜೈವಿಕ ಇಂಧನ ನೀತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ 10ನೇ ವಾರ್ಷಿಕ ಸರ್ವ ಸದಸ್ಯ ಸಮಿತಿ ಸಭೆಯ ನಂತರ ಜೈವಿಕ ಇಂಧನ ನೀತಿಯ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯ ಇಂಧನ ವ್ಯವಸ್ಥೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಹೊಸ ಜೈವಿಕ ಇಂಧನ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಈ ನೀತಿಯ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಶೀಘ್ರದಲ್ಲೇ ನೀತಿಯ ಕರಡು ಸಿದ್ಧಪಡಿಸಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಹಾಗೂ ವಿವಿಧ ರಾಜ್ಯ ಸರಕಾರಗಳ ಜೈವಿಕ ಇಂಧನ ನೀತಿಗಳ ವಿಶ್ಲೇಷಣೆ ಮಾಡಲಾಗಿದೆ. ಹಲವು ರಾಜ್ಯಗಳಿಗೆ ಭೇಟಿ ನೀಡಿ ಜೈವಿಕ ಇಂಧನ ಕಾರ್ಯಯೋಜನೆಗಳ ಅನುಷ್ಠಾನ ಪ್ರಕ್ರಿಯೆ ಹಾಗೂ ವಸ್ತುಸ್ಥಿತಿ ಅಧ್ಯಯನ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣ ನಿರ್ಮಾಣ ಮಾಡುವ ಕುರಿತು ಸಮ್ಮೇಳನ, ಕಾರ್ಯಗಾರ, ವಸ್ತು ಪ್ರದರ್ಶನ ಹಾಗೂ ಹೂಡಿಕೆದಾರರ ಸಮಾವೇಶಗಳಲ್ಲಿ ಭಾಗವಹಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಕೈಗಾರಿಕಾ ಸಂಘಟನೆಗಳು, ಸಂಸ್ಥೆಗಳು, ವಿದೇಶದ ವಿಶ್ವವಿದ್ಯಾಲಯಗಳು ಮುಂತಾದ ಸಂಸ್ಥೆಗಳ ಪ್ರತಿನಿಧಿಗಳನ್ನು ಚರ್ಚೆಗೆ ಆಹ್ವಾನಿಸಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಜೈವಿಕ ಇಂಧನ ಬಯೋಬ್ರಿಕೆಟ್ಸ್, ಬಯೋಪಿಲೆಟ್ಸ್, ಬಯೋಚಾರ್, ಬಯೋಕೋಲ್. ಬಯೋಡೀಸೆಲ್, 2ಜಿ ಎಥನಾಲ್, ಗ್ರೀನ್ ಹೈಡ್ರೋಜನ್ ಕಾರ್ಯ ಯೋಜನೆಗಳಲ್ಲಿ ನಿರತರಾಗಿರುವ ಉದ್ದಿಮೆದಾರರುಗಳ ವಿಚಾರ ವಿನಿಮಯ ಸಭೆಯನ್ನು ತುಮಕೂರು ಹಾಗೂ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸಚಿವ ಚೆಲುವರಾಯಸ್ವಾಮಿ ಮತ್ತು ಮಂಡಳಿ ಅಧ್ಯಕ್ಷ ಸುಧೀಂದ್ರ ಹಾಜರಿದ್ದರು.