ಟಿ ಎಮ್ ಕೃಷ್ಣ, ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ನಾನು

Most read

ಗುರು ಪೂರ್ಣಿಮೆಗೆ ಗುರು ದತ್ತಾತ್ರೇಯ ಸಂಥಿಂಗ್ ಗೆ ಹಾಡಬೇಕೆಂದು ನಮ್ಮ ಗುರುಗಳು ಠರಾವು ಹೊರಡಿಸಿದ್ದರು. ನಾನು ಕಡೇ ನಿಮಿಷದಲ್ಲಿ ನಾನು ಹಾಡುವುದನ್ನೆಲ್ಲಾ ಬದಲಿಸಿ ಸೂಫಿ ಹಾಡುಗಳನ್ನು ಹಾಡಿ, ನಂತರ ಗುಜರಾತಿನ ನರಮೇಧದಲ್ಲಿ ತೀರಿದವರಿಗೆ ಒಂದು ಕವ್ವಾಲಿ ಹಾಡಿದೆ. ಅಲ್ಲಿಗೆ ನನ್ನ ಸಂಗೀತ ಭವಿಷ್ಯ ಮುಗಿಯಿತು. ಮತ್ತೆ ನನಗೆಂದೂ ಶಾಸ್ತ್ರೀಯ ಸಂಗೀತ ಸಭೆಗಳಲ್ಲಿ ಹಾಡಲು ಅವಕಾಶ ಸಿಗಲಿಲ್ಲ ರೂಮಿ ಹರೀಶ್

ಇತ್ತೀಚೆಗೆ ಟಿ ಎಮ್ ಕೃಷ್ಣ ಅವರಿಗೆ ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾನಿಧಿ ಪ್ರಶಸ್ತಿ ಬಂದಾಗ, ಅದನ್ನು ದೊಡ್ಡದೊಂದು ವಿವಾದ ಮಾಡಿದಾಗ ನನಗೆ ತುಂಬಾ ನಗು ಬಂತು. ಕಾರಣ ಇಷ್ಟೆ …. ನಮ್ ಮೇಷ್ಟ್ರು ಹೇಳೋವ್ರು “ಮಾಧ್ವರಾಗಿ ಹುಟ್ಟಿ ಶಿವರಾತ್ರಿ ದಿವಸ ಶಿವನ ದೇವಸ್ಥಾನಕ್ಕೆ ಹೋಗದಿದ್ರೆ ಮುಂದಿನ ಜನ್ಮದಲ್ಲಿ ಕತ್ತೆಗಳಾಗಿ ಹುಟ್ತೀವಿ ಅಂತ”. ಅಂದ್ರೆ ಈಗ ಇರುವ ಕತ್ತೆಗಳೆಲ್ಲಾ ಹಿಂದಿನ ಜನ್ಮದಲ್ಲಿ ಮಾಧ್ವರಾಗಿ ಶಿವರಾತ್ರಿ ದಿವಸ ಶಿವನ ದೇವಸ್ಥಾನಕ್ಕೆ ಹೋಗದಿದ್ದವರು!.  ಬ್ರೇಮಿನ್‌ ನಿಯೋಲಿಬರಲ್ ನೆಗೋಸಿಯೇಷನ್ ಎನ್ನಬಹುದು ಅಥವಾ ಅವರಿಗೆ ಅವರೇ ಮಾರ್ಜಿನ್ ಕೊಟ್ಟುಕೊಳ್ಳುವ ಈಸಿ ವೇ ಔಟ್. ಇನ್ನೂ ಕೋಟ್ ಮಾಡಬೇಕೆಂದರೆ ನಮ್ಮ ವಿ ಎಲ್ ನರಸಿಂಹ ಮೂರ್ತಿಯವರು ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿರುವಂತೆ “ಬ್ರಾಹ್ಮಣರ ಸಂಸ್ಥೆಯೊಂದು ಬ್ರಾಹ್ಮಣ ‌ಮೊನೊಪಲಿಯನ್ನು ಪ್ರಶ್ನೆ ಮಾಡಿದ ಬ್ರಾಹ್ಮಣ ಕಲಾವಿದನಿಗೆ ಪ್ರಶಸ್ತಿ ಕೊಟ್ಟರೆ ಅದನ್ನು ಮಿಕ್ಕ ಬ್ರಾಹ್ಮಣರು ವಿರೋಧಿಸುತ್ತಾರೆ! ಈ ಬ್ರಾಹ್ಮಣರ ಜಗಳದಲ್ಲಿ ದಲಿತ-ಶೂದ್ರರಿಗೇನು ಕೆಲಸ?” ಇದು ನಿಜ.

ಕರ್ನಾಟಕ ಸಂಗೀತವನ್ನು ಅವರೇ ಮಾರ್ಗೀಯ ಅಂತ ಕರೆದಿದ್ದಾರೆ, ಅಂದರೆ ಹುಟ್ಟು ಹಾಕಿರುವುದು, ಗುಣಿಸಿ, ಭಾಗಿಸಿ ಸೃಷ್ಟಿಸಿರುವುದು. ಒಂದು ರೀತಿಯಲ್ಲಿ ಇದು ಬ್ರಾಮಣ ತಲೆಯ ಸಂಗೀತ ಎಂದೇ ಹೇಳಬಹುದು. ಎಲ್ಲವನ್ನೂ ಕ್ಯಾಲ್ಕುಲೇಟ್ ಮಾಡಿ ಬೆಳೆಸಿರುವುದು. ದೇವರ ಹೆಸರಿನಲ್ಲಿ ಎಲ್ಲವನ್ನೂ ಮಾಡುವ ಭಯಂಕರ ಪುರುಷ ಪ್ರಧಾನ, ಜಾತಿ ಕಾಯುವ, ಶ್ರೇಷ್ಠತೆಯ ರೋಗ ಹಿಡಿದಿರುವ ಪರಂಪರೆ ಎನ್ನಬಹುದು. ಇದಕ್ಕೆ ಅಪವಾದಗಳು ಇಲ್ಲಾಂತಲ್ಲ. ಮತ್ತೆ ಬರುಬರುತ್ತಾ ಲಿಬರಲ್ ಆದ ಪರಂಪರೆ ಇದು. ಯಾವಾಗ ಈ ಸಂಗೀತವನ್ನು ಶಾಲಾ ಕಾಲೇಜುಗಳಲ್ಲಿ ಹೇಳಿಕೊಡಲು ಶುರುವಾಯಿತೋ ಆಗ ಅದು ಕಟ್ಟಿಕೊಂಡ ಅದರ ಕೋಟೆಯಿಂದ ಹೊರ ಬಂತೆನ್ನಬಹುದು. 

ಶ್ರೇಷ್ಠತೆ, ಪವಿತ್ರ, ಶುದ್ಧ ಎಂಬ ವ್ಯಸನಗಳು ಶಾಸ್ತ್ರೀಯ ಎನಿಸಿಕೊಳ್ಳುವ ಯಾವುದೇ ಕಲಾ ಪ್ರಕಾರಗಳಿಗಿವೆ. ನಮ್ಮ ಮಾಧ್ಯಮಗಳು ಬಣ್ಣಿಸುವಂತೆ ಕೃಷ್ಣಾ ಅವರು ಯಾವುದೋ ಗ್ರೌಂಡ್ ಬ್ರೇಕಿಂಗ್ ಕೆಲಸವನ್ನು ಮಾಡಿದ್ದಾರೆ ಎಂದು ಅಷ್ಟಾಗಿ ನನಗನಿಸುವುದಿಲ್ಲ. ಕೃಷ್ಣ ರವರ ಜಾತಿಗೇ ಸೇರಿ ಬೇರೊಂದು ಶಾಸ್ತ್ರೀಯ ಸಂಗೀತವನ್ನು ಅವರಂತೆ ಕಲಿತ, ಆದರೆ ಅವರಿಗೆ ಸಿಕ್ಕ ಪಬ್ಲಿಸಿಟಿ ಸಿಗಲಿಕ್ಕೆ ಮುಂಚೆಯೇ ನಾನೇನೆಂದು ಜಗತ್ತಿಗೆ ಹೇಳಿದ ಕಾರಣ ಅವರಿಗೆ ಇರುವ ಲಿಬರಲ್ ಬೆಂಬಲ ನನಗೆ ಸಿಕ್ಕಿಲ್ಲ. ಹೀಗಾಗಿ ಇಲ್ಲಿ ನಾನು ಬರೆಯುವುದನ್ನು ಹೊಟ್ಟೆ ಉರಿ ಎಂದು ಬಿಂಬಿಸುವ ಅನೇಕ ಕಾಮೆಂಟ್ಸ್ ಗೆ ನಾನು ತೆರೆದು ಕೊಂಡಿದ್ದೇನೆ.

ಏಸುದಾಸ್, ಶೇಕ್ ಚಿನ್ನಾ ಮೌಲಾ, ಪಿಎಕೆ ಅಬ್ದುಲ್ ಅಜೀಜ್ ಹೀಗೆ ಬೇರೆ ಧರ್ಮದವರು ಮತ್ತು ಬ್ರಾಮಣೇತರ ಜಾತಿಯವರಾದ ನೈಯ್ಯಾಟಿನ್ಕರ ವಾಸುದೇವನ್ ಅವರು ದಲಿತರು ಮತ್ತು ಎಲ್ಲಾ ದೊಡ್ಡ ಅವಾರ್ಡುಗಳನ್ನು ಪಡೆದವರು. ಇದೆಲ್ಲಾ ಯಾರಿಗೂ ಗ್ರೌಂಡ್ ಬ್ರೇಕಿಂಗ್ ಆಗಿ ಕಾಣುವುದಿಲ್ಲ. ಹಾಡು ನೃತ್ಯದ ಪರಂಪರೆಯಲ್ಲಿ ಬಂದ ನಮ್ಮ ಗೌಹರ್ ಜಾನ್ ಆಗಲೀ, ರಸೂಲನ್ ಬಾಯಿಯಾಗಲಿ, ಕಡೆಗೆ ನಮ್ಮ ಸ್ವಂತ ಗಂಗೂಬಾಯಿ ಹಾನಗಲ್ ಮಾಡಿರುವ ಕೆಲವು  ಗ್ರೌಂಡ್ ಬ್ರೇಕಿಂಗ್ ಕೆಲಸಕ್ಕೆ ಹೀಗೆ ಯಾಕೆ ಪಬ್ಲಿಸಿಟಿ ಸಿಗಲ್ಲ? ಗಂಗೂ ತಾಯಿ ಒಮ್ಮೆಯೂ ತಪ್ಪಿಯೂ ಭಕ್ತಿ ಸಂಗೀತ ಹಾಡಿಲ್ಲ. ಅವರು ಖಯಾಲ್ ಮಾತ್ರ ಹಾಡಿದವರು. ದೃಪದ್ ಧಮಾರ್ಗೆಗೆ ಹೋಲಿಸಿದರೆ ಖಯಾಲ್ ಹಿಂದೂಸ್ಥಾನಿ ಸಂಗೀತದಲ್ಲಿ ಸ್ವಲ್ಪ ಕಡಿಮೆ ಸಂಗೀತ. (ಇತ್ತೀಚೆಗಂತೂ ಹಲವಾರು ಲಿಬರಲ್‌ ಗಳಿಗೆ ಈ ಸಂಗೀತವನ್ನು ಕಲಿಯುವುದು ಒಂದು ಇನ್ಫೋರ್ಸ್ಡ್ ಬ್ರಾಮಣೀಕರಣ ಎಂದು ತಿಳಿದೇ ಇಲ್ಲ)

ರಸೂಲನ್ ಬಾಯಿ ಮತ್ತು ಇತರ ಹಾಡುಗಾರ್ತಿಯರು ಕ್ವಿಟ್ ಇಂಡಿಯ ಚಳುವಳಿಗೆ ತಮ್ಮ ಗೌರವಧನವನ್ನು‌, ಆಭರಣಗಳನ್ನು ಕಾಂಗ್ರೆಸ್ಸಿಗೆ ಕಳಿಸಿದಾಗ ಅವರು ಇದು ಕೊಳಕು ಹಣ ಎಂದು ಹಿಂದಿರುಗಿಸಿದ್ದನ್ನು ಮತ್ತು  ಇವರೆಲ್ಲಾ ಸೇರಿ ಹೆಣ್ಣುಮಕ್ಕಳಿಗೆ ಶಾಲೆ ತೆಗೆದದ್ದು ಸುಲಭವಾಗಿ ಮರೆತಿರುವಂತಿದೆ. ಗೌಹರ್ ಜಾನ್ ಅದೇ ಕಾಂಗ್ರೆಸ್ಸಿಗೆ ಹಣ ಎತ್ತಲು ಹಾಡಿದ ಕಛೇರಿಗೆ ಗಾಂಧಿ ಅವರ ಮುಂದೆ ಕೂತು ಕೇಳಿದರೆ ಹಣ ದೇಣಿಗೆ ನೀಡುವುದಾಗಿ ಹಠ ಮಾಡಿದ್ದರು. ಗಾಂಧಿಯವರು ಬಂದಿಲ್ಲ. ಹೀಗಾಗಿ ಅವರು ಆಜಾದ್ ಗೆ ಅರ್ಧ ಹಣ ಮಾತ್ರ ದೇಣಿಗೆ ನೀಡಿದರು. ಇದೆಲ್ಲಾ ಇತಿಹಾಸ ಎಂದರೂ ನಮ್ಮ ಇಳೈರಾಜ ಇಸೈ ಜ್ಞಾನಿಗಿಂತಾ ಏನಾದರೂ ಮತ್ತೂ ಬ್ರೇಕ್ ಮಾಡುವುದಿದೆಯೇ?. ಅತೀ ಸಂಕೀರ್ಣ ಕರ್ನಾಟಕ ಸಂಗೀತ ರಾಗಗಳನ್ನು ಹಾಡುಗಳಲ್ಲಿ ತಂದು ಅದನ್ನು ಒಡೆದು ಅದರಿಂದ ಜಗತ್ತನ್ನೇ ಸೃಷ್ಟಿಸುವ ಇಳಯರಾಜ ಈ ಸಂಗೀತವನ್ನು ಕಲಿತಿರುವುದು ಟಿವಿ ಗೋಪಾಲಕೃಷ್ಣನ್ ಹತ್ತಿರ. ನನಗನ್ನಿಸುತ್ತದೆ ಕರ್ನಾಟಕ ಸಂಗೀತದ ಭವಿಷ್ಯವೇ ಇಳಯರಾಜಾನ ಕಲ್ಪನೆಯ ಹಾಡುಗಳಲ್ಲಿದೆ

ನಿಜ  ಹೇಳುವುದಾದರೆ ಟಿಎಮ್ ಕೃಷ್ಣ ಈ ಹೋರಾಟ ಮುಂದುವರೆಸಿ ಧೈರ್ಯ ಮಾಡಿ ಆ ಬ್ರಾಮಣ ಆಡಿಯನ್ಸ್ ನಿಂದ ಹೊರ ಬಂದು ತಾವು ಹೊಸದೊಂದು ಕಛೇರಿ ನೆಲೆಯುಂಟು ಮಾಡಿದ್ದರೆ ಅದರಲ್ಲಿ ಜಾತಿ ಕಟ್ಟುಪಾಡುಗಳಿಲ್ಲದ ಹಾಡುಗಾರರಿಗೂ ಅವಕಾಶ ಸಿಕ್ಕಿದ್ದರೆ, ಅದನ್ನು ನಮ್ಮದಾಗಿಸಿದ್ದರೆ ಅದಕ್ಕೆ ಅವರು ತೆರಬೇಕಾದ್ದು ಈ ಶಾಸ್ತ್ರೀಯ ಸಂಗೀತದ ಕಛೇರಿ ಅವಕಾಶಗಳು.

ಇದನ್ನೂ ಓದಿ- ಲೌ ಪಾಲಿಟಿಕ್ಸ್

ಹಾಗೇ ಇಷ್ಟು ಬ್ರಾಮಣೀಕರಣವನ್ನು ಎದುರಿಸಿ ಈಗ ಈ ಪುರಸ್ಕಾರ ಕೃಷ್ಣ ಅವರಿಗೆ ನಿಜವಾಗ್ಲೂ ಬೇಕೆ? ಕೃಷ್ಣ ಆವಾಜಿನ ನನ್ನ ಫಜೀತಿಯನ್ನು ಸರಿಪಡಿಸಲು ಒಪ್ಪಿದಾಗ (ಅಂದರೇ ನಾನು ಹೆಂಗಸಿನಿಂದ ಗಂಡಸಾಗಿ ಟ್ರಾನ್ಸಿಷನ್ ಆದಾಗ ಗಂಡಸಾಗಿ ನನ್ನ ಆವಾಜು ಒಡೆಯಿತು) ಅದನ್ನು ಅವರು ತುಂಬಾ ಗೌರವದಿಂದ ಸಲಹಿದರು. ಆದರೂ ಅದರಲ್ಲಿ ನನಗಿದ್ದ ಸಣ್ಣದೊಂದು ಡೌಟು, ನಾನು ಅದೇ ಜಾತಿಯಲ್ಲವೇ? ಎಂದು.

ಸಂಗೀತ ಕಲಾನಿಧಿ ಆ ಹೆಸರಲ್ಲೇ ಅವರು ಎದುರಿಸಿ ಹೋರಾಡಿದ ಬ್ರಾಮಣ ಕೊಳಕುತನ ಇದೆ. ಡೆಮಾಕ್ರಸಿ ಮಾತನಾಡುವ ಈ ಸಮಯದಲ್ಲಿ  ಆಸ್ಥಾನ ಮರ್ಯಾದೆ ಪಡೆದಂತಾಗುವುದಿಲ್ಲವೇ? ಅವಾರ್ಡ ಎಂಬ ಈ ರಾಜಕೀಯವೇ ಒಂದು ಫ್ಯೂಡಲ್ ವ್ಯವಸ್ಥೆಯ ಬ್ರಾಮಣ ಸಂಚು. ನಮ್ಮಂಥಾ ಬ್ರಾಮಣ ಜಾತಿಯಲ್ಲಿ ಹುಟ್ಟಿದವರು ಯೋಚನೆ ಮಾಡಬೇಕು….. ನಮಗೆ ಇನ್ನೂ ಈ ಪೇಟ್ರನೇಜ್ ಬೇಕೇ? ಅದೂ ನಮ್ಮ ಜಾತಿಯ ಸೌಲತ್ತಿನಿಂದ ಸಿಕ್ಕಿರುವ ಈ ಕೌಶಲ್ಯಗಳನ್ನು ನಾವು ಮತ್ತೆ ತೆಗೆದುಕೊಂಡು ಖುಶಿ ಪಡಲು ಸಾಧ್ಯವೇ?

ನನ್ನ ರಾಮರಾಯರು ಹೇಳಿದಂತೆ ಹಾಡಲು ಹೇಳಿ ಕೊಡಬಹುದು, ಆದರೆ ಎಲ್ಲಿ ಯಾರಿಗೆ ಏನು ಎನ್ನುವುದು ನಾವೇ ತೀರ್ಮಾನಿಸಬೇಕು. ನನ್ನ ಯೋಚನೆ ಖಯಾಲಿನಲ್ಲಿ ನನಗೆ ಪ್ರೇಕ್ಷಕರು ಅಥವಾ ಪಕ್ಕ ವಾದ್ಯದವರು ಅಥವಾ ಹಾಡು ಸಂಗೀತ ಅಲ್ಲ ಹಾಡು ನಮ್ಮನ್ನು ತೀರ್ಮಾನಿಸಬೇಕು……

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article