ಕಲಬುರಗಿ: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥ ಸಂಚಲನ ಕುರಿತು ಅಕ್ಟೋಬರ್ 28ರಂದು ಎಲ್ಲ ಸಂಘ ಸಂಸ್ಥೆಗಳೊಂದಿಗೆ ಶಾಂತಿ ಸಭೆಯನ್ನು ನಡೆಸಿ, ಅದರ ವರದಿಯನ್ನು ಅಕ್ಟೋಬರ್ 30ರಂದು ಸಲ್ಲಿಸುವಂತೆ ಹೈಕೋರ್ಟ್ ಕಲಬುರಗಿ ಪೀಠ ನಿರ್ದೇಶನ ನೀಡಿದೆ. RSS ಪಥಸಂಚಲನಕ್ಕೆ ನವಂಬರ್ 2ರಂದು ಅವಕಾಶ ನೀಡುವ ಕುರಿತ ಅರ್ಜಿ ವಿಚಾರಣೆ ಇಂದು ನಡೆಯಿತು.
ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ನ್ಯಾಯಮೂರ್ತಿ ಎಂಜಿಎಸ್ ಕಮಲ ಅವರು ಅರ್ಜಿ ವಿಚಾರಣೆ ನಡೆಸಿದರು.
ಸರ್ಕಾರದ ಪರವಾಗಿ ಆನ್ ಲೈನ್ ಮೂಲಕ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ವಾದ ಮಂಡಿಸಿ ಕಲಬುರಗಿ ಜಿಲ್ಲೆ ಹಾಗೂ ಚಿತ್ತಾಪುರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ಅರ್ಜಿಗಳನ್ನು ಕುರಿತು ನಿರ್ಧಾರ ಕೈಗೊಳ್ಳಲು ಮತ್ತೆ ಎರಡು ವಾರಗಳ ಕಾಲ ಸಮಯ ಬೇಕಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಅರುಣ ಶಾಮ್, ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದೆ. ಒಂದು ವೇಳೆ ಸಮಸ್ಯೆಗಳು ಉಂಟಾಗುವ ಆತಂಕ ಇದ್ದಲ್ಲಿ ಕೇಂದ್ರದ ಭದ್ರತಾ ಪಡೆಗಳ ನೆರವು ಪಡೆಯಬಹುದು ಎಂದು ವಾದಿಸಿದರು.
ಮತ್ತೆ ವಾದ ಮಂಡಿಸಿದ ಶಶಿಕಿರಣ ಶೆಟ್ಟಿ, ಸರ್ಕಾರ ಈ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿಲ್ಲ. ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಕಾಲಾವಕಾಶ ಕೇಳುತ್ತಿದೆ ಎಂದು ಮನವಿ ಮಾಡಿದರು. ಆಗ ನ್ಯಾಯಮೂರ್ತಿಗಳು ಶಾಂತಿಸ್ಥಾಪನೆ ಸಂಬಂಧ ಶಾಂತಿ ಸಭೆ ನಡೆಸುವಂತೆ ಸೂಚಿಸಿದರು.
ನ್ಯಾಯಮೂರ್ತಿಗಳ ಸಲಹೆಗೆ ಪ್ರತಿಕ್ರಿಯಿಸಿದ ಶಶಿಕಿರಣ ಶೆಟ್ಟಿ, ಅವರು ಶೀಘ್ರವೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಆಗ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ ಅವರು, ಅಕ್ಟೋಬರ್ 28ರಂದು ಜಿಲ್ಲಾ ಕೇಂದ್ರದಲ್ಲಿ ಸಂಬಂಧಪಟ್ಟ ಎಲ್ಲ ಸಂಘಟನೆಗಳ ಜತೆ ಶಾಂತಿ ಸಭೆ ನಡೆಸಿ, ಅದರ ವರದಿಯನ್ನು ಅಕ್ಟೋಬರ್ 30ರಂದು ಸಲ್ಲಿಸಿ ಎಂದು ನಿರ್ದೇಶನ ನೀಡಿದರು.

