ಆರ್‌ ಎಸ್‌ ಎಸ್‌, ಬಿಜೆಪಿ ಸಿದ್ಧಾಂತವು ಜಾತಿ ಅಸಮಾನತೆಯ ವ್ಯವಸ್ಥೆಯನ್ನು ಪೋಷಿಸಿಕೊಂಡೇ ಬಂದಿದೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Most read

ನವದೆಹಲಿ: ಆರ್‌ ಎಸ್‌ ಎಸ್‌ -ಬಿಜೆಪಿ ಸಿದ್ಧಾಂತವು ಜಾತಿ ಅಸಮಾನತೆಯ ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸುವುದಿಲ್ಲ, ಬದಲಿಗೆ ಇದನ್ನು ಪವಿತ್ರಗೊಳಿಸಲು ಬಯಸುತ್ತದೆ.  ಮೌನ ಎಂಬುವುದು ನಿಷ್ಠೆಯಾಗಿರುವ, ಅನ್ಯಾಯವು ಸಂಪ್ರದಾಯವಾಗಿರುವ ಶ್ರೇಣೀಕೃತ ವ್ಯವಸ್ಥೆ ಅವರ ಕನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಭಾಗಿದಾರಿ ನ್ಯಾಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರ್‌ ಎಸ್‌ ಎಸ್‌ -ಬಿಜೆಪಿ ಮನುವಾದಿ ದೃಷ್ಟಿಕೋನವು ಸಾಮಾಜಿಕ ಡಾರ್ವಿನಿಸಂನ ಮಾರು ವೇಷದಲ್ಲಿದೆ. ಅಲ್ಲಿ ಕೇವಲ ಪ್ರಬಲರು ಮಾತ್ರ ಘನತೆಗೆ ಅರ್ಹರಾಗಿರುತ್ತಾರೆ.  ಆದರೆ ನಮ್ಮ ಸಂವಿಧಾನವು ಬಲಿಷ್ಠರ ಬದುಕಿಗೆ ಭರವಸೆ ನೀಡುವುದಿಲ್ಲ, ಬದಲಿಗೆ ದುರ್ಬಲರಿಗೆ ನ್ಯಾಯ ಹಾಗೂ  ಭರವಸೆ ನೀಡುತ್ತದೆ. ಆದ್ದರಿಂದ, ನಾನು ನಮ್ಮ ಸಂವಿಧಾನದ ರಕ್ಷಣೆಗಾಗಿ ಕರೆ ನೀಡುತ್ತೇನೆ. ಸಂವಿಧಾನದ ರಕ್ಷಣೆಯ ಮೂಲಕ ಮಾತ್ರ ನಾವು ನಿಜವಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಬಹುದು. ಸ್ವತಂತ್ರ ಭಾರತದಲ್ಲಿ, ನಮ್ಮ ಸಂವಿಧಾನವೇ ನಮ್ಮ ಧರ್ಮ. ಇದು ಮಾತ್ರ ನಮ್ಮನ್ನು ಮನು ಧರ್ಮದ ಕ್ರೂರ ಕೈಗಳಿಂದ ರಕ್ಷಿಸುತ್ತದೆ ಎಂದಿದ್ದಾರೆ.

ಇಂದಿಗೂ, ಮೋಹನ್ ಭಾಗವತ್ ಮತ್ತು ಬಿಜೆಪಿ ನಾಯಕರು ಮೀಸಲಾತಿಯ ಕಾನೂನುಬದ್ಧತೆ ಮತ್ತು ಅವಧಿಯನ್ನು ಪ್ರಶ್ನಿಸುತ್ತಾರೆ. ಇದು ಸಾಮಾಜಿಕ ನ್ಯಾಯದ ಬಗ್ಗೆ ಅವರ ಮೂಲಭೂತ ಅಸ್ವಸ್ಥತೆಯನ್ನು ಮತ್ತು ಹಿಂದುಳಿದ ವರ್ಗಗಳಿಗೆ ಸಂವಿಧಾನಿಕ ರಕ್ಷಣೆಗಳನ್ನು ಕಿತ್ತುಕೊಳ್ಳುವ ಉದ್ದೇಶವನ್ನು ಸಾಬೀತುಪಡಿಸುತ್ತದೆ. ಈ ಪರಂಪರೆಯು ಕಾಂಗ್ರೆಸ್ ಚಳವಳಿಯ ನೈತಿಕ ಪರಂಪರೆಯಾಗಿದೆಯೇ ಹೊರತು ಈ ಮೌಲ್ಯಗಳಿಗೆ ವಿರುದ್ಧವಾಗಿರುವ ಆರ್‌ ಎಸ್‌ ಎಸ್‌ -ಬಿಜೆಪಿಯದ್ದಲ್ಲ. ಬಿಜೆಪಿ ವರ್ಣಾಶ್ರಮ ಮತ್ತು ಮನುಸ್ಮೃತಿಯನ್ನು ವೈಭವೀಕರಿಸುತ್ತಿರುವಾಗ, ನಾವು ಬುದ್ಧ, ಬಸವಣ್ಣ, ಮಹಾತ್ಮ ಫುಲೆ, ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣ ಗುರು, ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್ ಮತ್ತು ಇತರರಿಂದ ಸ್ಫೂರ್ತಿಯನ್ನು ಪಡೆಯಬೇಕು ಎಂದರು.

ಮಹಾತ್ಮ ಗಾಂಧೀಜೀಯವರಿಂದ ಹಿಡಿದು ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಪಕ್ಷ ಯಾವತ್ತೂ ಶೋಷಿತರ ಪರವಾಗಿ ನಿಂತಿದೆ.  ನ್ಯಾಯವು ಕೇವಲ ಘೋಷಣೆಯಲ್ಲ, ಇದು ಸಂವಿಧಾನದ ಭರವಸೆಯಾಗಿದೆ. ಮತ್ತು ಭಾಗಿದಾರಿಯು ಜನತಂತ್ರದ  ಜೀವನಾಡಿಯಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ರಾಹುಲ್ ಗಾಂಧಿಯವರು ಧೈರ್ಯ, ಸ್ಪಷ್ಟತೆ ಮತ್ತು ಸಹಾನುಭೂತಿಯಿಂದ  ನಾಯಕತ್ವ ವಹಿಸಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದಿನ ಭಾರತದಲ್ಲಿ, ರಾಹುಲ್ ಗಾಂಧಿಯವರು ಮತ್ತು ಕಾಂಗ್ರೆಸ್ ಪಕ್ಷವು ಮಾತ್ರ ಹಿಂದುಳಿದ ವರ್ಗಗಳಿಗೆ ಮತ್ತು ಎಲ್ಲಾ ಅಂಚಿನಲ್ಲಿರುವವರಿಗೆ ನ್ಯಾಯ ನೀಡಲು ನೈತಿಕ ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿದೆ ಎಂದರು.

ನ್ಯಾಯಕ್ಕಾಗಿ ಉತ್ಪಾದಕ ವರ್ಗದ ಚಳವಳಿಯು ಇಂದಿನಿಂದ ಆರಂಭವಾಗಿಲ್ಲ. ಇದು ನಾಗರಿಕ ಜಗತ್ತಿನ ಹೋರಾಟದ ಮುಂದುವರೆದ ಭಾಗವಾಗಿದೆ. ಸಾಮಾಜಿಕ ಅನ್ಯಾಯದ ವಿರುದ್ಧ ಮೊದಲ ಧ್ವನಿ ಎದ್ದಾಗಿನಿಂದ ಆರಂಭವಾದ ಪ್ರಯಾಣದಲ್ಲಿ  “ಒಬ್ಬ ಮನುಷ್ಯ ಇನ್ನೊಬ್ಬರಿಗಿಂತ ಏಕೆ ಮೇಲಾಗಿರಬೇಕು?” ಎಂದು ಪ್ರಶ್ನೆ  ಕೇಳಿದಾಗಿನಿಂದ ಶುರುವಾಗಿದೆ

ಗೌತಮ ಬುದ್ಧರು ವರ್ಣ ವ್ಯವಸ್ಥೆಯ  ಬುನಾದಿಯನ್ನೇ ಪ್ರಶ್ನಿಸಿ,  ಕರುಣೆ ಮತ್ತು ಸಮಾನತೆಯನ್ನು ಆಧರಿಸಿದ ಒಂದು ಧಾರ್ಮಿಕ ಪರ್ಯಾಯವನ್ನು ನೀಡಿದರು. 12ನೇ ಶತಮಾನದಲ್ಲಿ, ಕರ್ನಾಟಕದ ವಚನ ಚಳವಳಿಯು ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಮತ್ತು ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಜೇಡರ ದಾಸಿಮಯ್ಯನಂತಹ ಕಾರ್ಮಿಕ ಸಮುದಾಯಗಳ ಸುಧಾರಕರ ನಾಯಕತ್ವದಲ್ಲಿ ಜಾತಿಯನ್ನು ತಿರಸ್ಕರಿಸಿತು ಮತ್ತು ಕೆಲಸವೇ ಪೂಜೆ ಎಂದು, ಎಲ್ಲರೂ ಸಮಾನರು ಎಂದು ಘೋಷಿಸಿತು.

19ನೇ ಮತ್ತು 20ನೇ ಶತಮಾನಗಳಲ್ಲಿ ಈ ನೈತಿಕ ಶಕ್ತಿಯು ಸಂಘಟಿತ ಪ್ರತಿರೋಧವಾಗಿ ರೂಪಾಂತರಗೊಂಡಿತು. ದಕ್ಷಿಣದಲ್ಲಿ, ಜಸ್ಟಿಸ್ ಪಕ್ಷವು ರಾಜಕೀಯ ಮತ್ತು ಆಡಳಿತದಲ್ಲಿ ಹಿಂದುಳಿದ ವರ್ಗಗಳ ಒತ್ತಾಸೆಗೆ ಅಡಿಪಾಯವನ್ನು ಹಾಕಿತು. ಪಶ್ಚಿಮದಲ್ಲಿ, ಛತ್ರಪತಿ ಶಾಹು ಮಹಾರಾಜರು 1902ರಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಮಹಾರಾಷ್ಟ್ರದಲ್ಲಿ, ಮಹಾತ್ಮ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರು ಶೋಷಿತರಿಗೆ ಶಿಕ್ಷಣದ ದೀಪವನ್ನು ಬೆಳಗಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಈ ಪರಂಪರೆಯನ್ನು ಮುಂದುವರೆಸಲಾಯಿತು. ಅವರು ಸಮಾನತೆಯನ್ನು ಕೇವಲ ಆತ್ಮದಲ್ಲಿ ಮಾತ್ರವಲ್ಲ, ಕಾನೂನಿನಲ್ಲಿಯೂ ಗುರುತಿಸಿ ಸಂವಿಧಾನವನ್ನು ನಮಗೆ ನೀಡಿದರು ಎಂದು ಹೇಳಿದರು.

ಕೇರಳದ ನಾರಾಯಣ ಗುರು ಮತ್ತು ತಮಿಳುನಾಡಿನ ಪೆರಿಯಾರ್ ಅವರು ಮನುವಾದದ ತೀಕ್ಷ್ಣವಾದ ವಿಮರ್ಶೆಯೊಂದಿಗೆ ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆಯ  ದಬ್ಬಾಳಿಕೆಯ ಬಗ್ಗೆ ಲಕ್ಷಾಂತರ ಜನರನ್ನು ಜಾಗೃತಗೊಳಿಸಿದರು. ಕರ್ನಾಟಕದಲ್ಲಿ,  ಕುವೆಂಪು ಅವರು ಪ್ರತಿಯೊಬ್ಬ ವ್ಯಕ್ತಿಯೂ ಸಮಾನ; ಜಾತಿ ಎಂಬ ಕ್ರೌರ್ಯವನ್ನು ನಾವು ಮರೆಯಬೇಕಿದೆ ಎಂದು ನೆನಪಿಸಿದರು. ಮಹಾತ್ಮ ಗಾಂಧಿಯವರ ಸರ್ವೋದಯ ಮತ್ತು ಕುವೆಂಪುರವರ “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ನಿಜವಾದ ಒಳಗೊಳ್ಳುವಿಕೆಯನ್ನು ಪ್ರೇರೇಪಿಸಿತು. ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಗಾಗಿ ಪದಗಳನ್ನು ಎರವಲು ಪಡೆದರಾದರೂ, ಆ ಚೇತನವನ್ನು ಮರತೇಬಿಟ್ಟಿದ್ದರು.

ಬಿಜೆಪಿಯ ಘೋಷಣೆಗಳು ಸಾಮಾಜಿಕ ನ್ಯಾಯದೊಂದಿಗಿನ ತಮ್ಮ ಸೈದ್ಧಾಂತಿಕ ಅಸ್ವಸ್ಥತೆಯನ್ನು ಮರೆಮಾಚುತ್ತವೆ. ಅಗ್ನಿಪಥದಿಂದ ಹಿಡಿದು ಖಾಸಗೀಕರಣದವರೆಗೆ, ಅವರ ನೀತಿಗಳು ಮೀಸಲಾತಿಗಳನ್ನು ತಪ್ಪಿಸುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಮಾರಂಭದಲ್ಲಿ  ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಅನಿಲ್ ಜೈಹಿಂದ್ ಸೇರಿದಂತೆ ಅನೇಕ ಎಐಸಿಸಿ ನಾಯಕರು ಭಾಗವಹಿಸಿದ್ದರು.

More articles

Latest article