ಕಟ್ಟಡ ಕಲ್ಲು, ಮೈನಿಂಗ್ ಸ್ಟೋನ್ ರಾಯಲ್ಟಿ ಹೆಚ್ಚಳ; ಸಚಿವ ಸಂಪುಟ ನಿರ್ಧಾರ

Most read

ಬೆಂಗಳೂರು: ಕಟ್ಟಡ ಕಲ್ಲು, ಮೈನಿಂಗ್ ಸ್ಟೋನ್ ರಾಯಲ್ಟಿ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕಟ್ಟಡ ನಿರ್ಮಾಣದ ಕನಸಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸಚಿವ ಸಂಪುಟ ಸಭೆ ನಂತರ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದ ಬಗ್ಗೆ ಚರ್ಚೆಯಾಗಿದೆ. ರಾಯಲ್ಟಿ ಪರಿಷ್ಕರಣೆ ಮಾಡಲು ಸಂಪುಟ ಸಭೆ ಸಮ್ಮತಿಸಿದೆ ಎಂದು ತಿಳಿಸಿದ್ದಾರೆ.
ಕಟ್ಟಡ ಕಲ್ಲು, ಮೈನಿಂಗ್ ಕಲ್ಲು ಪ್ರತಿ ಟನ್ಗೆ 80 ರೂ. ರಾಯಲ್ಟಿ ನಿಗದಿಯಿಂದ 311.55 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಮೊದಲು ಮೆಟ್ರಿಕ್ ಟನ್ಗೆ 20 ರೂ. ರಾಯಲ್ಟಿ ನಿಗದಿಯಾಗಿತ್ತು. ಈಗ ಪ್ರತಿ ಮೆಟ್ರಿಕ್ ಕಲ್ಲಿಗೆ 10 ರೂ. ರಾಯಲ್ಟಿ ಹೆಚ್ಚಿಸಲಾಗಿದೆ. ರಾಯಲ್ಟಿ ಪಾವತಿಸದೆ ಖನಿಜ ಸಾಗಣೆ ಮಾಡಿದರೆ ದಂಡ ವಸೂಲಿಗೆ ನಿರ್ಧರಿಸಲಾಗಿದೆ. ಕಳೆದ 6-7 ವರ್ಷಗಳಿಂದ ದಂಡ ವಸೂಲಿಯಾಗಿಲ್ಲ, ಬಾಕಿಯಿದೆ. ಹಾಗಾಗಿ ಒನ್ಟೈಮ್ ಸೆಟ್ಲ್ಮೆಂಟ್ಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಗಣಿಗಾರಿಕೆ‌ ನಡೆಸುವವರು ಕಳೆದ ಐದು ವರ್ಷಗಳಿಂದ ದಂಡ ಪಾವತಿಸಿಲ್ಲ. ಅದನ್ನು ವಸೂಲಿ‌ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಒಟಿಎಸ್ ಮೂಲಕ ದಂಡ ವಸೂಲಿಗೆ ಕ್ರಮಕೈಗೊಳ್ಳಲಾಗುತ್ತಿದೆ. 6105 ಕೋಟಿ ರೂ. ದಂಡ ಬಾಕಿ ಉಳಿದಿದೆ. ಸರ್ಕಾರಕ್ಕೆ ಆದಾಯದ ಅಗತ್ಯವಿದ್ದು, ಅದನ್ನು ವಸೂಲಿ‌ ಮಾಡಲು ಹೊರಟಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಖನಿಜಗಳನ್ನು ಹೊಂದಿರುವ ಭೂಮಿಗೆ ತೆರಿಗೆ ಹಾಕಲು ಸರ್ಕಾರ ನಿರ್ಧರಿಸಿದೆ. ಯಾವುದೇ ರೀತಿಯ ಖನಿಜಗಳಿದ್ದರೂ ಭೂಮಾಲಿಕರು ತೆರಿಗೆ ಪಾವತಿಸಬೇಕಾಗುತ್ತದೆ. ಬಾಕ್ಸೈಟ್, ಕ್ರೋಮ್ ಇನ್ನಿತರ ಖನಿಜ ಇರುವ ಭೂಮಿ ಒಂದು ಟನ್ಗೆ 100 ರೂ. ರಾಯಲ್ಟಿ ನಿಗದಿ ಮಾಡಲಾಗಿದೆ. ಈ ತೆರಿಗೆಯನ್ನು ಭೂಮಾಲಿಕರು ಕಟ್ಟಬೇಕಿದೆ. ಆ ಖನಿಜದ ಹಕ್ಕುಗಳು ಭೂಮಾಲಿಕರಿಗೆ ಸೇರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

More articles

Latest article