ಕೈಕೊಟ್ಟ ಪ್ರೇಯಸಿಯ ವಾಹನಗಳಿಗೆ ಬೆಂಕಿ ಹಚ್ಚಿದ್ದ ರೌಡಿ ರಾಹುಲ್‌ ಸೆರೆ

Most read

ಬೆಂಗಳೂರು: ಹಲವು ವರ್ಷ ಪ್ರೀತಿಸಿ ನಂತರ ಕೈಕೊಟ್ಟ ಯುವತಿಯ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ರೌಡಿಯೊಬ್ಬ ಬೆಂಕಿ ಇಟ್ಟು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಹನುಮಂತನಗರ ಠಾಣೆಯ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್‌ (26) ಎಂಬಾತ ತನ್ನ ಸಹಚರರೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ  ಸುಬ್ರಹ್ಮಣ್ಯಪುರ ಮತ್ತು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ವಾಹನಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಣನಕುಂಟೆ ಸಮೀಪ ಅಡಗಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ಹೋಗಿದ್ದರು. ಆಗ ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಆಗ ಪೊಲೀಸರು  ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ ಒಂದು ವರ್ಷದಿಂದ ಸುಬ್ರಹ್ಮಣ್ಯಪುರದ ಹರೇಹಳ್ಳಿಯಲ್ಲಿ ಅಪಾರ್ಟ್‌ ಮೆಂಟ್‌ ವೊಂದನ್ನು ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದರು. ಈಕೆಯ ತಂದೆ ಮತ್ತು ಸಹೋದರ ಬನಶಂಕರಿಯಲ್ಲಿ ವಾಸವಾಗಿದ್ದರು. ಒಂಬತ್ತು ವರ್ಷಗಳಿಂದ ರೌಡಿ ರಾಹುಲ್‌ ನನ್ನು ಯುವತಿ ಪ್ರೀತಿಸುತ್ತಿದ್ದರು. ಇತ್ತೀಚೆಗೆ ರಾಹುಲ್‌ನನ್ನು ಯುವತಿ ನಿರ್ಲಕ್ಷ್ಯ ಮಾಡಿದ್ದರು. ಈ ಮಧ್ಯೆ ರಾಹುಲ್ ಗೆ ಬೇರೆ ಯುವತಿಯ ಜತೆ ಮದುವೆಯಾಗಿತ್ತು. ಮದುವೆಯಾದ ಮೇಲೂ ತನ್ನನ್ನು ಪ್ರೀತಿಸುವಂತೆ ಆರೋಪಿಯು ಯುವತಿಯ ಒತ್ತಡ ಹೇರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತನ್ನಿಂದ ದೂರವಾಗಿದ್ದ ಯುವತಿಯ ಮೇಲೆ ಸೇಡು ತೀರಿಸಿಕೊಳ್ಳಲು ಆರೋಪಿ ಸಂಚು ಹಾಕುತ್ತಿದ್ದ. ನಿನ್ನೆ ತಡರಾತ್ರಿ 12.30ರ ಸುಮಾರಿಗೆ ತನ್ನ ಮೂವರು ಸಹಚರರ ಜತೆ ಅಗಮಿಸಿ ಬನಶಂಕರಿಯಲ್ಲಿ ಇರುವ ಯುವತಿ ಮನೆಗೆ ಹೋಗಿ ದಾಂಧಲೆ ಎಬ್ಬಿಸಿದ್ದಾನೆ. ಮನೆ ಎದುರು ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ್ದ. ಈ ಬೆಂಕಿಯಿಂದ ಮನೆಯ ಪಕ್ಕದಲ್ಲಿ ನಿಲುಗಡೆ ಮಾಡಿದ್ದ ಮತ್ತೊಂದು ಕಾರು ಭಾಗಶಃ ಸುಟ್ಟು ಹೋಗಿದೆ.

ಯುವತಿ ಮನೆಯಲ್ಲಿ ಇಲ್ಲ ಎನ್ನುವುದು ತಿಳಿದು ಬಂದ ನಂತರ ಹರೇಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ ಒಳಗೆ ನುಗ್ಗಲು ಯತ್ನಿಸಿದ್ದ. ಆದರೆ, ಸೆಕ್ಯೂರಿಟಿ ಗಾರ್ಡ್ ಒಳಗೆ ಬಿಟ್ಟಿರಲಿಲ್ಲ. ಭದ್ರತಾ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ. ಯುವತಿಯ ಫೋಟೊ ತೋರಿಸಿ ಆಕೆಯ ಕಾರು ಯಾವುದು ಎನ್ನುವುದನ್ನು ತಿಳಿದುಕೊಂಡು ಆ ಕಾರಿಗೂ ಬೆಂಕಿ ಹಚ್ಚಿದ್ದ. ಆ ಕಾರನ್ನು ರೌಡಿಯೇ ಉಡುಗೊರೆ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಹುಲ್ ವಿರುದ್ಧ ಹನುಮಂತನಗರ, ಗಿರಿನಗರ ಠಾಣೆ ಹಾಗೂ ಇತರೆ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಡ್ರಗ್ಸ್‌ ಮಾರಾಟ ಸೇರಿದಂತೆ 18ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಹಲವು ವರ್ಷಗಳ ಹಿಂದೆ ಹನುಮಂತನಗರ ಠಾಣೆ ಪೊಲೀಸರು ರೌಡಿ ಪಟ್ಟಿ ತೆರೆದಿದ್ದರು.

More articles

Latest article