ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟ, ಸೇವನೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಮತ್ತು ತಂಬಾಕು ಸಂಬಂಧಿತ ರೋಗಗಳ ಹೆಚ್ಚಳವನ್ನು ತಡೆಯುವ ನಿಟ್ಟಿನಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆಯನ್ನ ನಿಷೇಧಿಸುತ್ತಿರುವುದಾಗಿ ಆರೋಗ್ಯ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ, ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ಸ್ ಟೊಬ್ಯಾಕೋ ಸರ್ವೇ 2016-17, ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ 8.8% ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಧೂಮಪಾನ ಮಾಡುತ್ತಾರೆ. ಇದು ರಾಜ್ಯದಲ್ಲಿ ತಂಬಾಕು ಸೇವನೆಯ ವ್ಯಾಪಕ ಅಪಾಯವನ್ನು ತೆರೆದಿಟ್ಟಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.
ಯುವ ಜನತೆಯು ಇತ್ತೀಚಿನ ವರ್ಷಗಳಲ್ಲಿ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು WHO ಗ್ಲೋಬಲ್ ಯೂತ್ ಟೊಬ್ಯಾಕೋ ಸರ್ವೇ (2019)ಯಲ್ಲಿ ದೃಢಪಟ್ಟಿದೆ. 13 ರಿಂದ15 ವರ್ಷ ವಯಸ್ಸಿನ ಸುಮಾರು ಐದನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಹಲವು ಬಗೆಯ ತಂಬಾಕು ಸೇವಿಸುತ್ತಿದ್ದಾರೆ. ತಂಬಾಕು ಒಳಗೊಂಡ ಶಿಶಾ ಮತ್ತು “ಹರ್ಬಲ್” ಶಿಶಾ ಇವೆಲ್ಲವೂ ವಿಷಕಾರಿ ಹೊಗೆಯನ್ನು ಹೊರಸೂಸುವುದರಿಂದ ಕ್ಯಾನ್ಸರ್, ಹೃದ್ರೋಗ ಹಾಗೂ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಮಹತ್ವದ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ.
ತಂಬಾಕಿನ ಅತಿಯಾದ ಬಳಕೆಯಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯೂ ಬೀಳುತ್ತಿದೆ. 35 ರಿಂದ 69 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿನ ತಂಬಾಕು ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರವು 2011ರಲ್ಲಿ 983 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದು ತಂಬಾಕು ಉತ್ಪನ್ನಗಳ ಬಳಕೆಗೆ ತಡೆಯೊಡ್ಡುವ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ. ತಂಬಾಕು ಬಳಕೆಯ ಮೂಲಕ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುತ್ತಿರುವುದು ಸರ್ಕಾರ ಗಮನಿಸಿದೆ. ಒಪಿಯಾಡ್ ಬಳಕೆಯಲ್ಲಿ ಅತಿಯಾದ ಹೆಚ್ಚಳ ಮತ್ತು ತಂಬಾಕು ಸೇವನೆಯು ಮಾದಕ ವ್ಯಸನದೆಡೆಗಿನ ಮೊದಲ ಹೆಜ್ಜೆ ಎಂಬುದನ್ನು ವಿಶ್ವ ಡ್ರಗ್ಸ್ ವರದಿ-2022 ಯಲ್ಲಿ ಉಲ್ಲೇಖಿಸಲಾಗಿದೆ.
ಹುಕ್ಕಾ ಸೇವನೆಯ ಅಪಾಯಗಳು ಸಿಗರೇಟ್ ಸೇವನೆಗಿಂತ ಹಲವು ಪಟ್ಟು ಹೆಚ್ಚಾಗಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಹುಕ್ಕಾ ಹೊಗೆಯು ನಿಕೋಟಿನ್, ಟಾರ್ ಮತ್ತು ಭಾರವಾದ ಲೋಹ ಸೇರಿದಂತೆ ಅನೇಕ ಹಾನಿಕಾರಕ ಪದಾರ್ಥಗಳನ್ನು ಹೊಂದಿದೆ. ಹುಕ್ಕಾ ಸೇವಿಸುವವರು ವಿವಿಧ ರೀತಿಯ ಕ್ಯಾನ್ಸರ್ ಮತ್ತು ಹೃದ್ರೋಗ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಶಿಕ್ಷಣ ಸಂಸ್ಥೆಗಳಿಗೆ ಸಮೀಪದಲ್ಲಿರುವ ಅಕ್ರಮ ಹುಕ್ಕಾ ಬಾರ್‌ಗಳು ಸೇರಿದಂತೆ ಹುಕ್ಕಾ ಮೇಲಿನ ನಿಷೇಧದಿಂದಾಗಿ ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ಬಾಗಿಲುಗಳು ಬಂದ್ ಆಗಲಿವೆ. ವಿಶೇಷವಾಗಿ ರಾಜ್ಯ ಸರ್ಕಾರವು ಹೇರಿದ ನಿಷೇಧವು, ಕೋಟ್ಪಾ 2003 ಮತ್ತು ಬಾಲ ನ್ಯಾಯ ಕಾಯಿದೆ, 2015 ಸೇರಿದಂತೆ ಕಾನೂನು ನಿಬಂಧನೆಗಳಿಂದ ಬೆಂಬಲಿತವಾಗಿದೆ. ಈ ನಿಯಮಗಳೆಲ್ಲವನ್ನೂ ಮೀರಿ ಹುಕ್ಕಾ ಬಾರ್‌ಗಳು ಇದುವರೆಗೂ ಕಾರ್ಯಾಚರಿಸುತ್ತಿತ್ತು.
ರಾಜ್ಯದ ಜನತೆಯ ಆರೋಗ್ಯವನ್ನು ಸಂರಕ್ಷಿಸಲು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯಕಾರಿ ಅಂಶಗಳ ವಿರುದ್ಧದ ದಿಟ್ಟ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಹುಕ್ಕಾ ಬ್ಯಾನ್ ಮೂಲಕ ಆರೋಗ್ಯ ಸಚಿವರು ಪುನರುಚ್ಚರಿಸಿದ್ದಾರೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಬಾರ್‌ಗಳು, ಲಾಂಜ್‌ಗಳು, ಕೆಫೆಗಳು, ಕ್ಲಬ್‌ಗಳು ಮತ್ತು ಇತರ ಸ್ಥಳಗಳಲ್ಲಿ ಹುಕ್ಕಾ ಬಳಕೆ, ಮಾರಾಟ ಮತ್ತು ಸೇವೆಯ ನಿಷೇಧವು ಯುವಜನರನ್ನು ಮಾದಕ ವ್ಯಸನದಿಂದ ಮತ್ತು ತಂಬಾಕಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಹಂತವಾಗಿದೆ.