ಬೆಂಗಳೂರು: ಅವಾಚ್ಯ ಮಾತುಗಳಿಂದ ನಿಂದಿಸುತ್ತಿದ್ದರು ಎಂದು ಭಾವನನ್ನೇ ಕೊಲೆ ಮಾಡಿದ್ದ ರೋಲ್ಡ್ ಗೋಲ್ಡ್ ಆಭರಣ ವ್ಯಾಪಾರಿಯನ್ನು ಬೆಂಗಳೂರಿನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಚಾಕುವಿನಿಂದ ತನ್ನ ಬಾವ ತಮಿಳುನಾಡಿನ ವೆಂಕಟೇಶ್ ಎಂಬುವರನ್ನು ಕೊಲೆ ಮಾಡಿದ್ದ. ಆರೋಪಿ ರಾಮು (54) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಾವ ಮತ್ತು ಮೈದುನರಾದ ವೆಂಕಟೇಶ್ ಹಾಗೂ ರಾಮು ತಮಿಳುನಾಡಿನಿಂದ ‘ರೋಲ್ಡ್ ಗೋಲ್ಡ್’ ಅಭರಣಗಳನ್ನು ತಂದು ಮೆಜೆಸ್ಟಿಕ್ ಮತ್ತು ಸುತ್ತಮುತ್ತಲ ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ವೆಂಕಟೇಶ್ ಇತ್ತೀಚೆಗೆ ಕೆಟ್ಟ ಮಾತುಗಳಿಂದ ರಾಮುವನ್ನು ನಿಂದಿಸುತ್ತಿದ್ದ. ವೆಂಕಟೇಶ್ ಸಾಲವಾಗಿ ಪಡೆದಿದ್ದ 500 ರೂ ಹಣವನ್ನು ರಾಮುಗೆ ಮರಳಿಸಿರಲಿಲ್ಲ. ಇದೇ ವಿಚಾರಕ್ಕೆ ಕಳೆದ ವಾರ ಇಬ್ಬರ ನಡುವೆ ಶ್ರೀರಾಂಪುರದ ಬಾರ್
ವೊಂದರ ಬಳಿ ಜಗಳ ನಡೆದಿತ್ತು. ಜಗಳವಾಡಿಕೊಂಡೇ ಇಬ್ಬರೂ ಮೆಜೆಸ್ಟಿಕ್ ರೈಲು ನಿಲ್ದಾಣದ ಹಿಂದಿನ ಗೇಟ್ ಹತ್ತಿರ ಬಂದಿದ್ದರು. ಅಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿದಾಗ ವೆಂಕಟೇಶ್‌ಗೆ ರಾಮು ಚಾಕುವಿನಿಂದ ಇರಿದು ಪರಾರಿ ಆಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.10ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೃತ ವ್ಯಕ್ತಿಯ ಸಹೋದರ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಚಿಕ್ಕಪೇಟೆಯಲ್ಲಿ ಅಡ್ಡಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ವೆಂಕಟೇಶ್ ಪದೇ ಪದೇ ಚುಚ್ಚು ಮಾತುಗಳಿಂದ ನಿಂದಿಸುತ್ತಿದ್ದ. ಇದರಿಂದ ನನಗೆ ಅವಮಾನವಾಗಿತ್ತು. ಆದ್ದರಿಂದ ಕೊಲೆ ಮಾಡಿದ್ದೇನೆ ಎಂದು ಆರೋಪಿ ರಾಮು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು
ತಿಳಿಸಿದ್ದಾರೆ.