ಬೆಂಗಳೂರು: ಮನೆ ಕಳ್ಳತನ ಹಾಗೂ ಮೊಬೈಲ್ ಕಳವು ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರ ಮೊಬೈಲ್ ಕಳವು ಮಾಡಿ ಪರಾರಿ ಆಗುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಹೆಗ್ಗನಹಳ್ಳಿ ನಿವಾಸಿ ಪವನ್ ಕುಮಾರ್(28) ಮತ್ತು ಬನ್ನೇರುಘಟ್ಟ ನಿವಾಸಿ ಕಿರಣ್ (24) ಬಂಧಿತ ಕಳ್ಳರು.
ಆರೋಪಿಗಳಿಂದ ರೂ. 5 ಲಕ್ಷ ಮೌಲ್ಯದ 18 ಮೊಬೈಲ್‌ಗಳು, ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ರಾಜಗೋಪಾಲನಗರದ 9ನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಯಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ಅದೇ ಬೈಕ್‌ನಲ್ಲಿ ಸುತ್ತಾಟ ನಡೆಸಿ ಕಳವು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರ ಬಂಧನದಿಂದ ನಾಲ್ಕು ಠಾಣೆಗಳಲ್ಲಿ ದಾಖಲಾಗಿದ್ದ ಐದು ಮೊಬೈಲ್ ಕಳವು ಮತ್ತು ಬೈಕ್ ಗಳ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬೀಗ ಹಾಕಿದ್ದ ಮನೆಗಳ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಟನ್‌ಪೇಟೆ ನಿವಾಸಿ ಮೊಹಮ್ಮದ್ ಮುದಾಸೀರ್ (40) ಬಂಧಿತ ಆರೋಪಿ. ಈತನಿಂದ ರೂ.8 ಲಕ್ಷ
ಮೌಲ್ಯದ 106 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.