ಮುಂಬೈ: ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಭಾಷೆಯ ಖ್ಯಾತ ಕಿರುತೆರೆ ನಟ ಅಮನ್ ಜೈಸ್ವಾಲ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ 23 ವರ್ಷದ ಜೈಸ್ವಾಲ್ ಅವರನ್ನು ಕೂಡಲೇ ಕಾಮಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಟ್ರಕ್ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ಧರ್ತಿಪುತ್ರ ನಂದಿನಿ’ ಧಾರಾವಾಹಿಯಲ್ಲಿನ ಮುಖ್ಯಪಾತ್ರದ ನಟನೆಗೆ ಜೈಸ್ವಾಲ್ ಹೆಸರುವಾಸಿಯಾಗಿದ್ದರು. ‘ಹೊಸ ಕನಸುಗಳು ಮತ್ತು ಅಂತ್ಯವಿಲ್ಲದ ಸಾಧ್ಯತೆಗಳೊಂದಿಗೆ 2025ಕ್ಕೆ ಕಾಲಿಡುತ್ತಿದ್ದೇನೆ’ ಎಂದು ಜೈಸ್ವಾಲ್ ಅವರು ಹೊಸ ವರ್ಷದ ಪ್ರಯುಕ್ತ ಇನ್‌ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ಹಂಚಿಕೊಂಡಿದ್ದ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದಕ್ಕೂ ಮುನ್ನವೇ ಈ ನಟ ದುರಂತ ಅಂತ್ಯ ಕಂಡಿರುವುವುದು ಅವರ ಅಭಿಮಾನಿಗಳಿಗೆ ಶೋಕ ತಂದಿದೆ.
.