ಬೇಡಿಕೆ ಈಡೇರಿಸದ ಕೇಂದ್ರ ಸರ್ಕಾರ: ಬ್ಯಾಂಕ್ ನಿವೃತ್ತರ ಒಕ್ಕೂಟಗಳ ಸಂಯುಕ್ತ ವೇದಿಕೆ ಪ್ರತಿಭಟನೆ

Most read

ಬೆಂಗಳೂರು: ಪಿಂಚಣಿ ಪರಿಷ್ಕರಣೆ, ಆರೋಗ್ಯ ವಿಮೆ ವ್ಯವಸ್ಥೆ ಸುಧಾರಣೆ ಒಳಗೊಂಡಂತೆ ಹಲವು ದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬ್ಯಾಂಕ್ ನಿವೃತ್ತರ ಒಕ್ಕೂಟಗಳ ಸಂಯುಕ್ತ ವೇದಿಕೆ ನಗರದ ಫ್ರೀಡಂ ಪಾರ್ಕ್ ನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿತು.

ಬ್ಯಾಂಕ್ ನಿವೃತ್ತರ ಸಂಯುಕ್ತ ವೇದಿಕೆಯು” ದೇಶದ ಸುಮಾರು ಏಳು ಬ್ಯಾಂಕ್ ನಿವೃತ್ತರ ಸಂಘಟನೆಗಳ ಒಂದು ರಾಷ್ಟ್ರೀಯ ಬೃಹತ್ ಸಂಘಟನೆಯಾಗಿದೆ. ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ, ಅಖಿಲ ಭಾರತ ನಿವೃತ್ತ ಬ್ಯಾಂಕ್ ನಿವೃತ್ತರ ಸಂಘ, ಫೋರಂ ಆಫ್ ರಿಟೈರ್ಡ್ ಬ್ಯಾಂಕ್ ಎಂಪ್ಲಾಯೀಸ್, ವಾಣಿಜ್ಯ ಬ್ಯಾಂಕ್ ಗಳ ನಿವೃತ್ತರ ಸಂಘ, ರಿಟೈರ್ಡ್ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್, ಬ್ಯಾಂಕ್ ರ್ಸ್ ಡಿಸರ್ವ್ ಜಸ್ಟಿಸ್ ಸೊಸೈಟಿ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ನ ಗುಂಪುಗಳ ನಿವೃತ್ತರ ಸಂಘಟನೆಗಳು ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾದರು.

“ಸಂಯುಕ್ತ ವೇದಿಕೆ”ಯ ಸಂಚಾಲಕರಾದ ಎಸ್.ಸಿ ಜೈನ್ ಮಾತನಾಡಿ, 1995 ರಿಂದ ಬಾಕಿ ಇರುವ ಬ್ಯಾಂಕ್ ನಿವೃತ್ತರ ಪಿಂಚಣಿ ಪರಿಷ್ಕರಣೆ,  ವಿಶೇಷ ಭತ್ಯೆಗಳ ಮೇಲೆ ಪಿಂಚಣಿ ನೀಡುವ, ಖಾಸಗಿ ಬ್ಯಾಂಕ್ ನಿವೃತ್ತರಿಗೂ ಎಕ್ಸ್ ಗ್ರೇಶಿಯಾ ಕೊಡುವ, ಅರೋಗ್ಯ ವಿಮೆಯ ಸುಧಾರಣೆ ಮತ್ತು  ಅರೋಗ್ಯ ವಿಮೆಯ ಮೇಲಿನ ಜಿ. ಎಸ್. ಟಿಯಿಂದ  ಸಂಪೂರ್ಣ ವಿನಾಯತಿ ನೀಡುವ, ವಾಣಿಜ್ಯ ಬ್ಯಾಂಕುಗಳ ಪಿಂಚಣಿದಾರರಿಗೆ ಆಗುತ್ತಿರುವ ತಾರತಮ್ಯ ತಪ್ಪಿಸುವ ಜೊತೆಗೆ  ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿದವರಿಗೂ  ಆದಷ್ಟು ಬೇಗ ಪಿಂಚಣಿ ನೀಡುವಲ್ಲಿ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕು ಎಂದರು.

ಒಕ್ಕೂಟದ ಜಂಟಿ ಪ್ರಧಾನ ಕಾರ್ಯದರ್ಶಿ  ಕೆ. ವಿಶ್ವನಾಥ ನಾಯ್ಕ್ ಮಾತನಾಡಿ, ಬ್ಯಾಂಕ್ ನಿವೃತ್ತರ ಬೇಡಿಕೆಗಳ ಬಗ್ಗೆ ಚರ್ಚಿಸಲು ನೇರವಾಗಿ ಬ್ಯಾಂಕ್ ನಿವೃತ್ತರ ಸಂಘಟನೆಗಳ ನಾಯಕರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾಮನ್ ಕರೆದು ಮಾತನಾಡಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಬಾರದು. ಇಲ್ಲವಾದಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಎ.ಆರ್.ಬಿ.ಇ.ಎ ಪ್ರಧಾನ ಕಾರ್ಯದರ್ಶಿ ಸಿ.ಎನ್. ಪ್ರಸಾದ್, ಕರ್ನಾಟಕ ರಾಜ್ಯ ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಗಿರಿರಾಜ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article