ರಾಜ್ಯದ ಖಾಸಗಿ ಕೈಗಾರಿಕೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧದ ವಿಧೇಯಕಕ್ಕೆ ಉದ್ಯಮ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡಿಗರಿಗಷ್ಟೇ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳುವ ಉದ್ಯಮಿಗಳಿಗೆ ಚಿಕ್ಕಬೆಳವಂಗಲದ ಹೇಮಂತ್ ಲಿಂಗಪ್ಪ ಬರೆದ ಬಹಿರಂಗ ಪತ್ರ ಇಲ್ಲಿದೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡ ಬಗ್ಗೆ ಕನ್ನಡ ರಾಜ್ಯದ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ ತಕ್ಷಣವೇ “ಮೆರಿಟ್ ಮೇಲಷ್ಟೇ ಕೆಲಸ.. ಮೆರಿಟ್ ಪರಿಗಣಿಸದೆ ಕನ್ನಡಿಗರಿಗೆ ಮಾತ್ರ ಕೆಲಸ ಕೊಟ್ಟರೆ ಬಹುದೊಡ್ಡ ನಷ್ಟವಾಗಲಿವೆ” ಎಂದು ಖಾಸಗಿ ಕಂಪೆನಿಗಳು ಉಯಿಲಿಡುತ್ತಿವೆ. ಅವರು ತಮ್ಮ HR ಗಳು ಏನೇನೂ ಬರದ ತಮ್ಮದೇ ರಾಜ್ಯದವರಿಗೆ ಹೇಗೆಲ್ಲಾ ಮಸಲತ್ತು ಮಾಡಿ ಕೆಲಸ ಕೊಡಿಸಿ ಉನ್ನತ ಸ್ಥಾನಗಳಲ್ಲಿ ಕೂರಿಸುತ್ತಿದ್ದಾರೆ ಎಂಬ ಬಗ್ಗೆಯೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಕನ್ನಡಿಗರಿಗೆ ಕೆಲಸ ಕೊಡಲು ಇರುವ ತಾಂತ್ರಿಕ ತಕರಾರು ಕರ್ನಾಟಕದಲ್ಲಿ ನುರಿತ ಪ್ರತಿಭೆಗಳ ಅಭಾವವಿದೆ. ಹೀಗೆಯೇ ಮುಂದುವರೆದರೆ ನುರಿತ ಕೆಲಸಗಾರರ ಅಭಾವದಿಂದ ಕಂಪೆನಿಗಳು ಬೇರೆಡೆಗೆ ಸ್ಥಳಾಂತರವಾಗಬೇಕಾಗುತ್ತದೆ ಎಂಬುದು.
ಇಂತಹ ಮೀಸಲಾತಿಯಿಂದ ಬೆಂಗಳೂರಿನ ಘನತೆಗೆ ಕೂಡಾ ಧಕ್ಕೆ ಬರುತ್ತದೆ ಎಂದು ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿಯೇ ಕಂಪೆನಿ ಕಟ್ಟಿ ಬೆಂಗಳೂರಿಗೆ ಕೀರ್ತಿ ತಂದ ಕಿರಣ್ ಮಜುಂದಾರ್ ಶಾ ರವರದ್ದು. ಇವರ ತಂದೆ ತಾಯಿ ಗುಜರಾತಿಗಳು. 1978 ರಲ್ಲಿ ಕೇವಲ 10,000 ರೂಪಾಯಿಗಳಿಂದ ಬೆಂಗಳೂರಿನಲ್ಲಿಯೇ ಶುರುವಾದ ಬಯೋಕಾನ್ ಇಂದು 22.5ಸಾವಿರ ಕೋಟಿಯ ಮೌಲ್ಯ ಹೊಂದಿದೆ. ಅವರ ಕಂಪನಿ ಬೆಳೆಯಲು ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರು ಬಹಳಷ್ಟು ಸವಲತ್ತುಗಳನ್ನು ಕೂಡಾ ಕೊಟ್ಟಿದ್ದಾರೆ. ಆದರೆ ಈಗ ಇವರಿಗೆ ಅದರ ನೆನಪು ಬರುವುದಿಲ್ಲ.
ಮತ್ತೊಬ್ಬರು ಕನ್ನಡಿಗರೇ ಆದ, ಹೊರಗಿನವರ ಪ್ರೀತಿಯ ಟಿ.ವಿ. ಮೋಹನ್ ದಾಸ್ ಪೈ ರವರು. “ನಾನು ಕನ್ನಡ ಮಾತನಾಡಬಲ್ಲೆ. ಆದರೆ ಕನ್ನಡ ಬರೆಯಲು, ಓದಲು ಬರುವುದಿಲ್ಲ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕನ್ನಡಿಗರಿಗೆ ಮೀಸಲಾತಿ ಎಂಬ ಕಾನೂನು ಕಠಿಣ ಮತ್ತು ಅಸಾಂವಿಧಾನಿಕ. ನಾನು ಸುಲಲಿತವಾಗಿ ಕನ್ನಡ ಬಳಸಿದರೆ ಮಾತ್ರ ಕನ್ನಡಿಗನೇ? ಯಾವುದೋ ಸಂಸ್ಥೆಯೊಂದು ನನ್ನ ಕನ್ನಡ ಭಾಷೆಯ ಜ್ಞಾನದ ಬಗ್ಗೆ ಪರೀಕ್ಷೆ ಪಾಸು ಮಾಡಿದರೆ ಮಾತ್ರ ಕನ್ನಡಿಗನೇ? ಇಲ್ಲವೆಂದರೆ ಕನ್ನಡಿಗನಲ್ಲವೇ? ಕೇವಲ ಒಂದು ಪರೀಕ್ಷೆ ಆಧಾರದ ಮೇಲೆ ನಾನು ಕನ್ನಡಿಗನಲ್ಲ ಎಂದು ಹೇಗೆ ನಿರ್ಧರಿಸುತ್ತೀರಿ? ಎಂದು ಸವಾಲೆಸೆದು ಕೆಂಡಾ ಮಂಡಲರಾಗಿದ್ದಾರೆ. ಸರ್ಕಾರ ಇಂತಹ ಕಾನೂನು ಮಾಡುವುದು ಬಿಟ್ಟು ಶೈಕ್ಷಣಿಕ ಗುಣಮಟ್ಟದ ಬಗ್ಗೆ, ಉನ್ನತ ವ್ಯಾಸಂಗದ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದಿದ್ದಾರೆ.
ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಓದಿ, ಬರೆದು, ಮಾತನಾಡಿದರೆ ಮಾತ್ರ ಕನ್ನಡಿಗರೇ? ಹಾಗಿದ್ದರೆ ಮಾತ್ರ ಕೆಲಸಕ್ಕೆ ಅರ್ಹರೇ? ಕನ್ನಡಿಗರಿಗೆ ಮಾತ್ರ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳುವವರಿಗೂ ನಮ್ಮ ಮರುಪ್ರಶ್ನೆಗಳಿವೆ.
ಸರಿಯಾಗಿ ಇಂಗ್ಲಿಷ್ ಮಾತನಾಡಲು,,ಓದಲು ಬರದ ಮಾತ್ರಕ್ಕೇ ಕನ್ನಡಿಗರಿಗೆ ಪ್ರತಿಭೆ ಇಲ್ಲವೇ? ಕೇವಲ ಇಂಗ್ಲೀಷ್ ಭಾಷೆಯಲ್ಲಿ ಪರೀಕ್ಷೆ ಇಟ್ಟು ಕಂಪೆನಿಗಳಿಗೆ ಪ್ರತಿಭಾನ್ವೇಷಣೆ ಮಾಡುವುದೂ ಕೂಡಾ ಯಾವುದೋ ಸಂಸ್ಥೆಗಳೇ ಅಲ್ಲವೇ? ತಮ್ಮ ಪರೀಕ್ಷೆಗಳನ್ನು ಪಾಸು ಮಾಡದ ಕನ್ನಡಿಗರು ಪ್ರತಿಭೆಯೇ ಇಲ್ಲದವರೇ? “ಕನ್ನಡಿಗರಿಗೆ ಮಾತ್ರ” ಕೆಲಸ ಕೊಟ್ಟರೆ ನಷ್ಟವಾಗುತ್ತದೆ ಎನ್ನುವವರು ಕನ್ನಡಿಗರಿಂದ ಏನನ್ನೂ ಪಡೆಯದೇ ಉದ್ಧಾರವಾಗಿದ್ದಾರೆಯೇ? ತಾವುಗಳೆಲ್ಲರೂ “ಇಂಗ್ಲೀಷ್ ಬಂದರೆ ಮಾತ್ರ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ” ಎಂಬ ಭ್ರಮೆ ಮೂಡಿಸಿ, ಕೇವಲ ಕನ್ನಡ ಕಲಿತವರಲ್ಲಿ ಭಯ ಹುಟ್ಟಿಸಿಲ್ಲವೇ? ಅಂದ ಹಾಗೆ, ಕನ್ನಡಿಗರಿಗೆ ಆಡಳಿತ ಬರುವುದಿಲ್ಲವೇ? ಡಿ ದರ್ಜೆಯ ನೌಕರಿಗೂ ನಾವು ಅರ್ಹರಲ್ಲವೇ? ನೀವು ಹೊರಗಿನವರು ಬರುವ ಮುನ್ನ, ಹೊರಗಿನವರಿಗೆ ಮಣೆ ಹಾಕುವ ಮುನ್ನ ನಮ್ಮಲ್ಲಿ ಕೈಗಾರಿಕೆಗಳೇ ಇರಲಿಲ್ಲವೇ? ಕನ್ನಡಿಗರು ಬಹುರಾಷ್ಟ್ರೀಯ ಕಂಪೆನಿಗಳನ್ನು ಕಟ್ಟಿ ನಿರ್ವಹಿಸಿಲ್ಲವೇ?
ಮುಂದುವರೆದು, ಕರ್ನಾಟಕ ಸರ್ಕಾರವು ರಾಜ್ಯದ ಜನರಿಗೆ ನೀಡಿರುವ ಉಚಿತ ಯೋಜನೆಗಳನ್ನು ಲೇವಡಿ ಮಾಡುತ್ತಿರುವ ಇವರ ಕಂಪೆನಿಗಳು ಕರ್ನಾಟಕ ಸರ್ಕಾರದಿಂದ ಯಾವುದೇ ರಿಯಾಯಿತಿ ಅಥವಾ ಉಚಿತ ಸವಲತ್ತುಗಳನ್ನು ಪಡೆದಿಲ್ಲವೇ?
ಪೈಗಳೇ, ಯಾವ ಉಚಿತ ಯೋಜನೆಗಳೂ ಕಡ್ಡಾಯವಲ್ಲ. ಹೆಂಗಸರು ತಾವು ಆಧಾರ್ ಕಾರ್ಡ್ ತೋರಿಸಿ ಉಚಿತ ಟಿಕೇಟ್ ಪಡೆಯದೆ ಹಣ ಕೊಟ್ಟು ಸ್ವಾಭಿಮಾನ ಪ್ರದರ್ಶಿಸಬಹುದು. ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದೆ ಬೆಸ್ಕಾಂ ಬಿಲ್ ಪಾವತಿ ಮಾಡಬಹುದು. ಇದರಿಂದ ಸರಕಾರಕ್ಕೆ ಹೊರೆ ಆಗುತ್ತಿರುವುದರ ಬಗ್ಗೆ ನಿಮಗೆ ಬಹಳಷ್ಟು ಕಾಳಜಿ ಇದೆ ಅಲ್ಲವೇ?
ನಮ್ಮಲ್ಲೂ ಒಂದು ಸಲಹೆ ಇದೆ. ಹೀಗೆ ಮಾಡಿ. ತಮ್ಮ ಕಂಪೆನಿಗಳಿಗೆ ಬರುವ ಮಹಿಳೆಯರ ಉಚಿತ ಪ್ರಯಾಣದ ಬಾಬ್ತನ್ನು ಸರ್ಕಾರಕ್ಕೆ ನೀವೇ ಪಾವತಿ ಮಾಡಿ. ಲಕ್ಷ ಸಂಬಳ ಎಣಿಸುವವರೂ ಬಿಟ್ಟಿ ಪ್ರಯಾಣ ಮಾಡುತ್ತಿರುವುದನ್ನು ಕಂಡಿದ್ದೇವೆ. ಗೃಹಜ್ಯೋತಿ ಯೋಜನೆಯ ಕರೆಂಟು ಬಿಲ್ಲನ್ನು ಲೆಕ್ಕ ಮಾಡಿ ನೀವೇ ಸಗಟಾಗಿ ಬೆಸ್ಕಾಂ ಗೆ ಕಟ್ಟಿಬಿಡಿ. ನಾಳೆಯೇ ಸಾಲದ ಹೊರೆಯಿಂದ ಸರ್ಕಾರ ಆಚೆಗೆ ಬರುತ್ತದೆ. ಅದರ ಬಾಬ್ತನ್ನು ನಿಮ್ಮ ಉದ್ಯೋಗಿಗಳ ಸಂಬಳದಲ್ಲೇ ಮುರಿದುಕೊಳ್ಳಿ. ಓದು ಮುಗಿದರೂ ಉದ್ಯೋಗ ಸಿಗದೆ ಅಲೆಯುತ್ತಿರುವ ಯುವಕರಿಗೆ ಸರಕಾರದ ಬದಲು ನೀವೇ 2,000 ಹಣ ಕೊಡಿ. ತಾವುಗಳೇ ಹೇಳುವ, ನಿಮ್ಮ ಚಾಕರಿಗೆ ಅವಶ್ಯಕವಿರುವ SKILL Training ಅನ್ನು ಉಚಿತವಾಗಿ ಕೊಡಿ.
ತಾವೇ ವಿರೋಧಿಸುವ ಹಾಗೆ ಸರಕಾರ ಇದಕ್ಕೆಲ್ಲಾ ಕನ್ನಡ ಬರೆಯಲು ಬರಲೇಬೇಕು ಎಂಬ ಕಡ್ಡಾಯ ನಿಯಮವನ್ನು ರೂಪಿಸಿಲ್ಲ. ತಮ್ಮ ಮಾತಿನಂತೆಯೇ ಈ ಸವಲತ್ತುಗಳನ್ನು ಪಡೆಯಲು ಇಲ್ಲಿನ “ಆಧಾರ್ ಕಾರ್ಡ್ ಕನ್ನಡಿಗ” ರಾಗಿದ್ದರೆ ಸಾಕು. ಅದು ಬಿಟ್ಟು ನಿಮ್ಮ ತೆವಲಿಗೆ ಬಡವರ ಅನ್ನದ ತಟ್ಟೆಗೆ ಕೈ ಹಾಕಬೇಡಿ.
ನನಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ರವರು ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. “ಕುಂಬಾರನ ಸೂಕ್ಷ್ಮ ಕಸುಬುದಾರಿಕೆ, ಮೇದರವನ ಬುಟ್ಟಿ ಹೆಣೆಯುವ ಕಲೆಗಾರಿಕೆ ಮಾನ್ಯತೆ ಕಳೆದುಕೊಂಡು ಓದುಬರಹ, ಜ್ಞಾಪಕ ಶಕ್ತಿ, ಇಂಗ್ಲಿಷ್ ಮಾತುಗಳು ಪರೀಕ್ಷೆಗಳಲ್ಲಿ ಮೆರಿಟ್‌ಗಳಾದವು. ಮೇದರವನೂ, ಕುಂಬಾರನೂ, ಅಗಸನೂ ಮೆರಿಟ್ ಇಲ್ಲದವನಾಗಿ ಕೆಲಸ ಮತ್ತು ಅನ್ನ ಕಳೆದು ಕೊಂಡ.”
ಹೇಮಂತ್ ಲಿಂಗಪ್ಪ, ಚಿಕ್ಕಬೆಳವಂಗಲ