ಬೆಂಗಳೂರು: ಭದ್ರಾ ನದಿಯಲ್ಲಿ ಸಿಲುಕಿ ಮುಳುಗಿ ಪ್ರಾಣ ಕಳೆದುಕೊಳ್ಳುತ್ತಿದ್ದ 30ಕ್ಕೂಹೆಚ್ಚು ಹಸುಗಳನ್ನು ರಕ್ಷಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಹೊನ್ನೆಕೂಡಿಗೆ ಸಾಲೂರು ಬಳಿ ಸಾವಿನಂಚಿಗೆ ತಲುಪಿದ್ದ ಹಸುಗಳನ್ನು ರಕ್ಷಿಸಲಾಗಿದೆ.
ನದಿ ಮಧ್ಯದ ದ್ವೀಪದಂತಹ ಸ್ಥಳಕ್ಕೆ ಹೋಗಿದ್ದ ಹಸುಗಳು ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮುಳುಗುವ ಭೀತಿಗೆ ಸಿಲುಕಿದ್ದವು. ಈ ಸಂದರ್ಭದಲ್ಲಿ ಬೋಟ್ ಮೂಲಕ ಹಸುಗಳಿದ್ದ ಸ್ಥಳಕ್ಕೆ ತೆರಳಿ, ಅವುಗಳನ್ನು ರಕ್ಷಿಸಲಾಗಿದೆ.
ಭದ್ರಾ ಹುಲಿ ಸಂರಕ್ಷಿತ ಅರಣ್ಯ ಸಿಬ್ಬಂದಿ, ಸ್ಥಳೀಯ ಗ್ರಾಮಸ್ಥರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಹಾವೇರಿಯಲ್ಲಿ ಗ್ರಾಮಸ್ಥರ ಹುಚ್ಚಾಟ:
ಹಾವೇರಿಯಲ್ಲಿ ವರದಾ ನದಿ ಅಪಾಯದ ಪ್ರಮಾಣದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಪ್ರವಾಹ ಭೀತಿ ಉಂಟಾಗಿದೆ. ಹಾಲಗಿ-ಮರೋಳ ಸೇತುವೆ ಜಲಾವೃತಗೊಂಡಿದೆ.
ಜಲವಾವೃತಗೊಂಡಿರುವ ಸೇತುವೆ ಮೇಲೆ ಮಕ್ಕಳ ಜೊತೆ ಸೇರಿ ಗ್ರಾಮಸ್ಥರು ಹುಚ್ಚಾಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಶಿರೂರು ದುರಂತ: ಮೃತದೇಹಗಳಿಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ:
ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿತದಿಂದ ಮೃತಪಟ್ಟವರ ಮೃತದೇಹಗಳ ಶೋಧ ಕಾರ್ಯಾಚರಣೆ 9ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮೇಲಿನ ಮಣ್ಣು ಹಾಗೂ ಬಂಡೆ ಕಲ್ಲುಗಳನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದೆ. ಇನ್ನೂ ಪತ್ತೆಯಾಗದ ಮೂವರ ಮೃತದೇಹಕ್ಕಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಈವರೆಗೂ 8 ಮೃತದೇಹಗಳು ಪತ್ತೆಯಾಗಿವೆ. ಉಳಿದ ಮೂವರ ಮೃತದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ. NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ನಡೆಯುತ್ತಿದೆ.