ಗಣರಾಜ್ಯೋತ್ಸವ ಅಂಗವಾಗಿ ಮೆಟ್ರೋ ರೈಲು ಸಂಚಾರ ಬೆಳಗ್ಗೆ 6 ಗಂಟೆಗೆ ಆರಂಭ

Most read

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಜನವರಿ 26 ರಂದು ನಮ್ಮ ಮೆಟ್ರೋ ರೈಲು ಸಂಚಾರ ಭಾನುವಾರ ಒಂದು ಗಂಟೆ ಬೇಗ ಆರಂಭವಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಭಾನುವಾರ ನಮ್ಮ ಮೆಟ್ರೋ ರೈಲು ಸೇವೆಗಳು ಬೆಳಿಗ್ಗೆ 7 ಗಂಟೆಯ ಬದಲಿಗೆ ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾರಂಭ ಮಾಡಲಿವೆ. ನಾಲ್ಕೂ ಟರ್ಮಿನಲ್​ಗಳಿಂದ ಮತ್ತು ಮೆಜೆಸ್ಟಿಕ್​ನಿಂದ ಮೊದಲ ರೈಲು ಬೆಳಗ್ಗೆ 6 ಗಂಟೆಗೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ ಸಿಎಲ್)‌ ತಿಳಿಸಿದೆ.

ಲಾಲ್​ಬಾಗ್​​ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಮತ್ತು ಅಂದು ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ) ದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚುವರಿಯಾಗಿ 20 ರೈಲುಗಳು ಸಂಚಾರ ಮಾಡಲಿವೆ. ಈ ವೇಳೆ ಸ್ಮಾರ್ಟ್ ಕಾರ್ಡ್, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಅಥವಾ ಕ್ಯೂಆರ್ ಟಿಕೆಟ್ ಬಳಸಬಹುದಾಗಿ ಎಂದೂ ನಮ್ಮ ಮೆಟ್ರೋ ತಿಳಿಸಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಲಾಲ್​ಬಾಗ್​ ಮೆಟ್ರೋ ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಟೋಕನ್ ಬದಲಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ರೂ. 30 ರಂತೆ ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತದೆ. ಈ ಪೇಪರ್ ಟಿಕೆಟ್​ಗಳ ಮೂಲಕ ಲಾಲ್​ಬಾಗ್​ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಖರೀದಿಸಿದ ದಿನದಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಪೇಪರ್ ಟಿಕೆಟ್‌ಗಳು ಮಾತ್ರ ಮಾನ್ಯವಾಗಿರುತ್ತವೆ. ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಈ ಅವಧಿಯಲ್ಲಿ ಟೋಕನ್‌ಗಳನ್ನು ನೀಡಲಾಗುವುದಿಲ್ಲ. ನಮ್ಮ ಮೆಟ್ರೋದ ಎಲ್ಲಾ ಪ್ರಯಾಣಿಕರು, ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಬಿಎಂಆರ್‌ಸಿಎಲ್ ಕೋರಿದೆ.

More articles

Latest article