ಗಣ ರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಹೂಗಳಲ್ಲಿ  ಅರಳಲಿರುವ ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ

Most read

ಬೆಂಗಳೂರು: 2025ರ ಗಣ ರಾಜ್ಯೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆ ಹಮ್ಮಿಕೊಳ್ಳುವ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ವಿಷಯ ಕುರಿತ ಹೂವಿನ ಪ್ರತಿಕೃತಿ ಅರಳಲಿದೆ. 2025ರ ಜನವರಿ 16 ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜೀವನ ಗಾಥೆಯನ್ನು  ಪುಷ್ಪಗಳಲ್ಲಿ ಅರಳಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ವಾಲ್ಮೀಕಿ ಮತ್ತು ರಾಮಾಯಣ ಕುರಿತು ಯಾವ ರೀತಿ  ಪುಷ್ಪಗಳಲ್ಲಿ ಚಿತ್ರಿಸಬೇಕು ಎಂದು  ತಜ್ಞರು ಮತ್ತು ಪರಿಣಿತರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ರಾಮಾಯಣ ಮಹಾಕಾವ್ಯದ ಪ್ರಮುಖ ಘಟನಾವಳಿಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಜತೆಗೆ ವಾಲ್ಮೀಕಿ ಅವರ

ಜೀವನದ ಪ್ರಮುಖ ಘಟನೆಗಳು ಪುಷ್ಪಗಳಲ್ಲಿ ಆರಳಲಿವೆ. ವಾಲ್ಮೀಕಿ ಅವರು ರಾಮಾಯಣ ರಚಿಸುತ್ತಿರುವ ಪ್ರತಿಮೆವಿಶೇಷ ಆಕರ್ಷಣೆಯಾಗಿರಲಿದೆ.

ಪ್ರದರ್ಶನಕ್ಕಾಗಿ ಕಟ್ ಫ್ಲವರ್ಸ್, ಇಲಾಖೆ ನರ್ಸರಿಗಳಲ್ಲಿ ವೈವಿಧ್ಯಮಯ ಪುಷ್ಪಗಳನ್ನು ಹೂ ಕುಂಡಗಳಲ್ಲಿ ಬೆಳೆಯಲಾಗುತ್ತಿದೆ. ಸನ್ ಫ್ಲವರ್ ನ ಕಟ್ ಫ್ಲವರ್ಸ್, ಶೀತ ಪ್ರದೇಶಗಳಲ್ಲಿ ಬೆಳೆಯುವ ಹೂಗಳು, ಈ ಬಾರಿಯ ಆಕರ್ಷಣೆಯಾಗಿವೆ. ದೇಶ ವಿದೇಶಗಳಿಂದಲೂ ವಿವಿಧ ವೈವಿಧ್ಯಮಯ ತಳಿಯ ಹೂಗಳನ್ನೂ. ಆಮದು ಮಾಡಿಕೊಳ್ಳಲಾಗುತ್ತದೆ. ಪ್ರತಿ ಬಾರಿಯಂತೆ ಈ ವರ್ಷವೂ ಸುಮಾರು 7-8 ಲಕ್ಷ   ಹೂಗಳನ್ನು ಬಳಸಲಾಗುತ್ತದೆ. ಪಿಂಕ್, ಕಿತ್ತಳೆ ಬಣ್ಣದ ಗುಲಾಬಿ ಹೂಗಳು, ಬಿಳಿ, ಪಿಂಕ್ ಮತ್ತು ಹಳದಿ ವರ್ಣಗಳ ಸೇವಂತಿಗೆ ಹೂಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಬಾರಿಯೂ ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳನ್ನು ತರಿಸಲು ಇಲಾಖೆ ನಿರ್ಧರಿಸಿದೆ. ಜೊತೆಗೆ ಆಕರ್ಷಕ ಬೋನ್ಸಾಯ್, ಇಕಾಬೇನಾ ಪ್ರದರ್ಶನವಿರುತ್ತದೆ. ಗಾಜಿನ ಮನೆಯ ಹೊರ ಭಾಗದಲ್ಲೂ ಹೂವಿನ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಬ್ಯಾಂಡ್ ಸ್ಟ್ಯಾಂಡ್, ರಾಕ್ ಗಾರ್ಡನ್  ಸೆಲ್ಫಿ ಪಾಯಿಂಟ್ ಇದ್ದೇ ಇರುತ್ತದೆ. ಮೊದಲ ಆರು ದಿನಗಳ ನಂತರ ಹೂಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಅಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್ ಬೆರಾ, ಸೇವಂತಿಗೆ, ದ್ರಸಿನಾ, ಜನಾಡೋ ಹೂಗಳಿಂದ ವಾಲ್ಮೀಕಿ ಗಮನ ಸೆಳೆಯಲಿದ್ದಾರೆ. 

ಈ ಬಾರಿಯೂ ಸುಮಾರು 10 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು  ನಿರೀಕ್ಷಿಸಲಾಗಿದೆ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಪಾರ್ಕಿಂಗ್ ವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.  ಶಾಲೆಯ ಗುರುತಿನ ಚೀಟಿ ತೋರಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ

More articles

Latest article