ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರನೇ ಆರೋಪಿ ಜಗದೀಶ್ ಹಾಗೂ ಏಳನೇ ಆರೋಪಿ ಅನುಕುಮಾರ್ ಪರವಾಗಿ ವಕೀಲ ಎಚ್.ಚಂದ್ರಶೇಖರ್ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ನೇತೃತ್ವದ ಪೀಠವು ತೀರ್ಪು ಕಾಯ್ದಿರಿಸಿದೆ.
ರಾಜ್ಯ ಸರ್ಕಾರ ಹಾಗೂ ದರ್ಶನ್ ಪರ ವಕೀಲರ ವಾದ ಆಲಿಸಿದ್ದ ನ್ಯಾಯಪೀಠವು, ಉಳಿದ ಆರೋಪಿಗಳಿಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿತ್ತು.
ಜಗದೀಶ್ ಹಾಗೂ ಅನುಕುಮಾರ್ ನಾವಿಬ್ಬರು ವೃತ್ತಿಯಲ್ಲಿ ಆಟೊ ಚಾಲಕರಾಗಿದ್ದು, ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ನಟ ದರ್ಶನ್ ಜತೆಗೂ ಗುರುತಿಸಿಕೊಂಡಿಲ್ಲ. ಘಟನೆ ನಂತರ ಶೆಡ್ ಹೊರಗೆ ದರ್ಶನ್ ಜತೆ ನಾವು ತೆಗೆಸಿಕೊಂಡಿರುವ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳೆಂದು ಬಿಂಬಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ರೇಣುಕಾಸ್ವಾಮಿಯನ್ನು ನಾವಿಬ್ಬರು ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದೆವು. ಅವರ ಯೋಜನೆಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾಲ್ಕನೇ ಆರೋಪಿ ಹೇಳಿಕೆ ನೀಡಿದ್ದಾರೆಉಳಿದಂತೆ, ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು ಮೇ 15ರಂದು ಈ ಪ್ರಕರಣದ ಎಲ್ಲ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುದಕ್ಕೆ ಪ್ರಬಲ ಸಾಕ್ಷ್ಯಗಳಿದ್ದು, ಕೂಡಲೇ ಜಾಮೀನು ರದ್ದು ಮಾಡಬೇಕೆಂದು ಒತ್ತಾಯಿಸಿ ಪ್ರಮಾಣಪತ್ರ ಸಲ್ಲಿಸಿತ್ತು. ದರ್ಶನ್ ಹಾಗೂ ಪವಿತ್ರಾ ಗೌಡ, ಮೇ 20ರಂದು ತಮಗೆ ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ರದ್ದು ಮಾಡಬಾರದು ಎಂದು ಕೋರಿ ಪ್ರಮಾಣಪತ್ರ ಸಲ್ಲಿಸಿದ್ದರು.