ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ಉಪೇಂದ್ರ ತಮ್ಮ ಎಕ್ಸ್ ಜಾಲತಾಣದಲ್ಲಿ ನೀಡಿರುವ ಹೇಳಿಕೆ ಈಗ ನಗೆಪಾಟಲಿಗೆ ಈಡಾಗಿದ್ದು, ಇದು ಅತಿಬುದ್ಧಿವಂತಿಕೆಯ ಪ್ರದರ್ಶನ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.
ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂಧಪಟ್ಟ ವ್ಯಕ್ತಿಗಳ (ಆರೋಪಿಗಳು ಮತ್ತು ಸಂತ್ರಸ್ಥರು) ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು ಎಂದು ಉಪೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದರು. ಮುಂದುವರೆದು, ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು. ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು, ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು ಎಂದು ಹೇಳಿಕೊಂಡಿದ್ದರು.
ಘಟನೆಯ ಕುರಿತು ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುವ ಬದಲು ಉಪೇಂದ್ರ ಕಾನೂನು ಸುಧಾರಣೆಯ ಕುರಿತು ಮಾತನಾಡಿರುವುದು, ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನು ಆಡದೇ ಇರುವುದು, ಕೊಲೆಗಡುಕರ ಕುರಿತು ಯಾವ ಟೀಕೆಯನ್ನೂ ಮಾಡದೇ ಇರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ. ಕೊಲೆ ನಡೆದಿದ್ದು ತಪ್ಪು, ಅದನ್ನು ನಾನು ಖಂಡಿಸುತ್ತೇನೆ ಎಂದು ಹೇಳುವಷ್ಟು ಧೈರ್ಯವೂ ಉಪೇಂದ್ರ ಅವರಿಗಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಉಪೇಂದ್ರ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ಚಿಂತಕ ಅಲ್ಮೀಡಾ ಗ್ಲಾಡ್ ಸನ್, ಇದೊಂದು ವಿಶೇಷ ಪ್ರತಿಭೆ ಮಾರಾಯ್ರೆ! ಹುಟ್ದಾಗನೇ ಮೆದುಳನ್ನು ತೊಡೆ ಮಧ್ಯೆ ಇಟ್ಕಂಡು ಹುಟ್ದಿರೋದು. ಬುದ್ಧಿ ಬಿಡಿ, ಮೆದುಳೊಳಗೆ ಲದ್ದಿನೂ ಇಲ್ದಿರೋ, ಕೇವಲ ಜಾತಿಯ ಕಾರಣಕ್ಕೆ ತನ್ನನ್ನೆ ತಾನು ಬುದ್ವಂತ ಎಂದು ಘೋಷಿಸಿಕೊಂಡಿರುವವ. ಈತನ ಪ್ರಕಾರ ಈಗ ಪೋಲೀಸ್ ತಾವು ಮಾಡುವ ತನಿಖೆಯ ಶೂಟಿಂಗ್ ಮಾಡಿ ಧಾರಾವಾಹಿ ರೂಪದಲ್ಲಿ ಜನರಿಗೆ ನಿತ್ಯ ತೋರಿಸಬೇಕು. ಈತನ ಬಾಲಬಡುಕರ ಗ್ಯಾಂಗೊಂದಿದೆ. ಈತನ ಬಗ್ಗೆ ಪೋಸ್ಟ್ ಹಾಕಿದೊಡನೆ ಕಾ ಕಾ ಕಾ ಎಂದು ಬರುತ್ತವೆ. ಮಜಾಕೀಯ! ಎಂದು ಕಟುವಾಗಿ ಟೀಕಿಸಿದ್ದಾರೆ.
ನಿಮ್ಮ ಭೂಕಬಳಿಕೆ ಅವ್ಯವಹಾರ, ಹಿರೇಮಠ್ ತೆಗೆದಿಟ್ಟ ಸಾಕ್ಷಿ ಪುರಾವೆಗಳು ಇವೆಲ್ಲಾ ಮೊದಲು ಜಗತ್ತಿಗೆ ತಿಳಿಯಬೇಕು.! ಮೊದಲಿಗೆ ನಿಮ್ಮ ಕೇಸ್ ಮುಖಾಂತರವೇ ಲೈವ್ ಸ್ಟ್ರೀಮಿಂಗ್ಗೆ ಅನುಮತಿ ತೆಗೆದುಕೊಳ್ಳಿ, ಹುಲು ಮಾನವರಾದ ನಾವೆಲ್ಲ ನೋಡುತ್ತೇವೆ—ಏನಂತೀರಾ, ಕೊಳಚೆ ಮನಸಿನ ಅಗ್ರಹಾರದವರೆ.?! ಸಗಣಿ ತಿಂದಿದ್ದರು ಬೋಗಸ್ ಮಾತುಗಳಿಗೇನು ಕೊರತೆ ಇಲ್ಲ.! ಎಂದು ಗುರುರಾಜ್ ಅಂಜನ್ ಟೀಕಿಸಿದ್ದಾರೆ.
ನೇರವಾಗಿ ವಿಷಯಕ್ಕೆ ಬನ್ನಿ…. ಇಷ್ಟುದ್ದ ಬರ್ದು ಏನು ಪ್ರಯೋಜನ? ಉಪೇಂದ್ರ ಅವರೇ… ದರ್ಶನ್ ಮಾಡಿದ ಕಾನೂನುಬಾಹಿರ ಕೆಲಸವನ್ನು ಖಂಡಿಸುತ್ತೇನೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ… ಇಷ್ಟೇ ಬರೆದರೂ ಸಾಕಿತ್ತು… ಸುದೀಪ್ ನೇರವಾಗಿ ಹೇಳಿದ್ದಾರೆ. ನೋಡಿ ಒಮ್ಮೆ… ಎಂದು ಮಿರ್ಚಿ ಕಾರ್ನರ್ ಎಂಬ ಟ್ವಿಟರ್ ಹ್ಯಾಂಡಲ್ ನಿಂದ ಕಮೆಂಟ್ ಮಾಡಲಾಗಿದೆ.
ಸುಮುಖ ಉಪೇಂದ್ರ ಎಂಬುವವರು ಕಮೆಂಟ್ ಮಾಡಿದ್ದು, ಸರ್ ನಿಮ್ಮ ಅಭಿಮಾನಿಯಾಗಿ ಹೇಳ್ತಿದೀನಿ, ನಿಮ್ಮ ಗೊಂದಲಗಳ ಬಗೆಹರಿಸಿಕೊಂಡು ಆಮೇಲೆ ಪೋಸ್ಟ್ ಮಾಡಿ. ಇಲ್ಲಿ ನೀವು ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ದ್ವಂದ್ವ ನಿಲುವನ್ನು ಹೊಂದಿರುವಂತೆ ತೋರುತ್ತಿದೆ.. ಒತ್ತಡಗಳ ತಡೆದು ಪ್ರಕರಣ ಬೆಳಕಿಗೆ ತಂದ ಪೊಲೀಸ್ ಅಧಿಕಾರಿಗಳ ವೃತ್ತಿಪರತೆಯನ್ನು ಸಾಧ್ಯವಾದರೆ ಶ್ಲಾಘಿಸಿ.. ಅನುಮಾನಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.