ರಾಯಚೂರು: ನರೇಗಾ ಯೋಜನೆಯನ್ನು ತಿದ್ದುಪಡಿಗೊಳಿಸಿ ವಿಬಿ ರಾಮಜಿ ಯೋಜನೆ ಜಾರಿಗೊಳಿಸುವ ಮೂಲಕ ರೈತರು, ದುಡಿಯುವ ವರ್ಗ, ಕೃಷಿ ಮತ್ತು ಕೂಲಿ ಕಾರ್ಮಿಕರನ್ನು ಹತ್ತಿಕ್ಕಲು ಬಿಜೆಪಿ ನೇತೃತ್ವದ ಎನ್ ಡಿ ಸರ್ಕಾರ ಸಂಚು ನಡೆಸಿದೆ ಎಂದು ರಾಯಚೂರು ಲೋಕಸಭಾ ಸದಸ್ಯ ಜಿ.ಕುಮಾರನಾಯಕ ಗಂಭೀರ ಆರೋಪ ಮಾಡಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ರಾಮನ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳುವ ಮೂಲಕ ಗ್ರಾಮೀಣ ಜನರ ಉದ್ಯೋಗವನ್ನು ಕಸಿಯಲಾಗಿದೆ ಎಂದು ಟೀಕಿಸಿದರು.
ನಂತರ ಅವರು ನರೇಗಾ ಮತ್ತು ವಿಬಿ ಜಿ ರಾಮ್ ಜಿ ಯೋಜನೆಯ ಅಂಶಗಳನ್ನು ವಿಶ್ಲೇಷಿಸುತ್ತಾ ನರೇಗಾದಲ್ಲಿ ದೇಶದ ಪ್ರತಿಯೊಂದು ಗ್ರಾಮದಲ್ಲೂ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಿತ್ತು. ಆದರೆ, ರಾಮ್ ಜಿ ಯೋಜನೆಯಲ್ಲಿ ಆಯ್ದ ಗ್ರಾಮಗಳಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ ಮಾತ್ರ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿದೆ. ಈ ಮೂಲಕ ಶೋಷಿತ ಹಾಗೂ ದುಡಿಯುವ ವರ್ಗದ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನರೇಗಾದಲ್ಲಿ ವರ್ಷದ 365 ದಿನಗಳಲ್ಲಿ ಯಾವಾಗ ಬೇಕಾದರೂ ಕೆಲಸ ಕೇಳುವ ಅವಕಾಶ ಇತ್ತು. ಬಡವರ ಬೇಡಿಕೆ ಆಧಾರದ ಮೇಲೆ ವರ್ಷವಿಡೀ ಉದ್ಯೋಗಕ್ಕೆ ಒತ್ತಾಯಿಸುವ ಹಕ್ಕು ಇತ್ತು. ವಿಬಿ ರಾಮಜಿಯಲ್ಲಿ ಕೇವಲ 60 ದಿನಗಳ ಉದ್ಯೋಗ ಮಾತ್ರ ಲಭ್ಯವಾಗಲಿದೆ. ಈ ಯೋಜನೆಯಿಂದ ಇಡೀ ದೇಶಕ್ಕೆ ಅನ್ಯಾಯವಾಗಲಿದೆ. ಉದ್ಯೋಗ ಎನ್ನುವುದು ಸಾಂವಿಧಾನಿಕ ಹಕ್ಕು. ಅದು ವರ್ಷವಿಡೀ ಲಭ್ಯವಾಗಬೇಕು. ಆದರೆ, ಹೊಸ ಯೋಜನೆ ಹೆಸರಿನಲ್ಲಿ ನಿರಂತರ ಉದ್ಯೋಗಕ್ಕೆ ಕತ್ತರಿ ಹಾಕಲಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ನಿಗದಿಪಡಿಸುವ ಅನುದಾನದಲ್ಲಿ ಶೇ. 40ರಷ್ಟು ಹಣವನ್ನು ರಾಜ್ಯವೇ ಭರಿಸಬೇಕಿದ್ದು ಇದು ಮತ್ತೊಂದು ಹೊರೆಯಾಗಲಿದೆ. ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಕಡ್ಡಾಯ ಪ್ರಾತಿನಿಧ್ಯತೆ ಅಧಿಕಾರ ರದ್ದುಗೊಳಿಸಲಾಗಿದೆ ಎಂದರು.
2023ರಿಂದ ಇದುವರೆಗೆ 36 ಕೋಟಿ ಮಾನವ ಕೆಲಸ ದಿನಗಳನ್ನು ಸೃಷ್ಟಿಸಿ 1 ಕೋಟಿ ಕುಟುಂಬಗಳಿಗೆ ಆರ್ಥಿಕ ಲಾಭವಾಗಿದೆ. 10 ಲಕ್ಷ ಪರಿಶಿಷ್ಟ ಪಂಗಡಗಳ ಜನರಿಗೆ ಉದ್ಯೋಗ ದೊರಕಿದೆ. ಈ ಮೂಲಕ 14 ಲಕ್ಷ ಗ್ರಾಮೀಣ ಆಸ್ತಿಗಳನ್ನು ಸೃಷ್ಟಿಸಲಾಗಿದೆ ಎಂದು ವಿವರಿಸಿದರು.
ಒಂದು ಕಡೆ ಕಾರ್ಪೋರೇಟ್ ಕಂಪನಿಗಳಿಗೆ ರೂ. 47 ಸಾವಿರ ಕೋಟಿ ರಿಯಾಯಿತಿ ನೀಡಲಾಗಿದೆ. ಬಡವರು ಹಾಗೂ ಶೋಷಿತ ಹಕ್ಕುಗಳ ಪರವಾಗಿ ಹೋರಾಟ ನಡೆಸಿದರೆ ನಕ್ಸಲರು ಎಂಬ ಹಣೆಪಟಿ ಕಟ್ಟಲಾಗುತ್ತಿದೆ. ವಿನಾಕಾರಣ ಈ ಯೋಜನೆಗೆ ರಾಮನ ಹೆಸರು ತುರುಕಲಾಗಿದೆ.
ನಾವು ರಾಮನನ್ನು ವಿರೋಧಿಸುವುದಿಲ್ಲ. ರಾಮ ನಮ್ಮ ಆರಾಧ್ಯ ದೈವ. ರಾಮ ನಮ್ಮೆಲ್ಲರ ಹೃದಯದಲ್ಲಿದ್ದಾನೆ. ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುವುದನ್ನು ಮುಂದುವರೆಸಿದೆ ಎಂದ ಸಂಸದ ಕುಮಾರ ನಾಯಕ ಕೇಂದ್ರ ಸರ್ಕಾರ ಗ್ರಾಮಗಳ ಸ್ವಯಂ ಆಡಳಿತದ ಹಕ್ಕನ್ನು ಮರುಸ್ಥಾಪಿಸಬೇಕು. ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಮರು ಜಾರಿಗೊಳಿಸಿ ಉದ್ಯೋಗದ ಹಕ್ಕನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಪಡಿಸಿದರು.

