ಹೈದರಾಬಾದ್: ಪುಷ್ಪ-2 ಚಲನಚಿತ್ರ ಪ್ರದರ್ಶನ ಸಂದರ್ಭದಲ್ಲಿ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ ಅವರಿಗೆ ರೆಗ್ಯುಲರ್ ಜಾಮೀನು ಮಂಜೂರಾಗಿದೆ. ಸದ್ಯಕ್ಕೆ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಹೈದರಾಬಾದ್‌ನ ನಾಂಪಲ್ಲಿಯ 2ನೇ ಹೆಚ್ಚುವರಿ ಮೆಟ್ರೊಪಾಲಿಟಿನ್ ಸೆಷನ್ ನ್ಯಾಯಾಲಯದ ನ್ಯಾಯಾದೀಶರು, ವಾದ ಪ್ರತಿವಾದಗಳನ್ನು ಆಲಿಸಿದ ನಂತರ ರೆಗ್ಯುಲರ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು. ಅಲ್ಲು ಅರ್ಜುನ್ ಪರ ಅವರ ವಕೀಲ ಅಶೋಕ್ ರೆಡ್ಡಿ ವಾದಿಸಿದರು. ರೂ.50,000 ಬಾಂಡ್‌ನ ತಲಾ ಇಬ್ಬರ ಶ್ಯೂರಿಟಿಗಳನ್ನು ಒದಗಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ.
ಅಲ್ಲದೇ, ಅಲ್ಲು ಅರ್ಜುನ್ ಅವರು ಇದೇ ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದೂ ಸೂಚಿಸಿದ್ದಾರೆ. ಸದ್ಯಕ್ಕೆ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಹೈದರಾಬಾದ್‌ನಲ್ಲಿ ಡಿ.4ರಂದು ಪುಷ್ಪ–2 ಪ್ರೀಮಿಯರ್ ಪ್ರದರ್ಶನದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಆಗ 35 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಎಂಟು ವರ್ಷದ ಮಗ ಗಂಭೀರರವಾಗಿ ಗಾಯಗೊಂಡಿದ್ದ. ಆ ಬಾಲಕ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಮೃತ ಮಹಿಳೆಯ ಕುಟುಂಬ ಸದಸ್ಯರು ಡಿಸೆಂಬರ್ .5 ರಂದು ಚಿತ್ರಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಪೊಲೀಸರು ಮೂವರನ್ನು ಬಂಧಿಸಿದ್ದರು. ಅಲ್ಲು ಅರ್ಜುನ್ ಅವರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ತೆಲಂಗಾಣ ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣ ಕುರಿತು ತೆಲುಗು ಚಿತ್ರರಂಗದಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು.