ಭುವನೇಶ್ವರ: ರೀಲ್ಸ್ ಗಾಗಿ ರೈಲು ವೇಗವಾಗಿ ಚಲಿಸುವಾಗ ಹಳಿಗಳ ಮಧ್ಯೆ ಮಲಗಿ ಅಪಾಯಕಾರಿ ಸಾಹಸ ಪ್ರದರ್ಶಿದ ಇಬ್ಬರು ಬಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರನ್ನು ವಶಕ್ಕೆ ಪಡೆದಿರುವ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
ಬೌದ್ಧ ಜಿಲ್ಲೆಯ ಪುರಾನಾಪಾನಿ ರೈಲು ನಿಲ್ದಾಣದ ಬಳಿಯ ತಾಲುಪಾಲಿ ಬಳಿ ಬಾಲಕನೊಬ್ಬ ರೈಲು ಬರುವಾಗ ಹಳಿಯಲ್ಲಿ ಮಲಗಿ ರೈಲು ಹೋದ ಮೇಲೆ ಎದ್ದೇಳುತ್ತಾನೆ. ರೀಲ್ಸ್ ಗಾಗಿ ಇನ್ನೊಬ್ಬ ಬಾಲಕ ಈ ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರ್ ಪಿಎಫ್ ಪ್ರಕರಣ ದಾಖಲಿಸಿಕೊಂಡು ಬಾಲಕರಿಬ್ಬರನ್ನು ವಶಕ್ಕೆ ಪಡೆದಿದೆ.
ಈ ಅಪಾಯಕಾರಿ ವಿಡಿಯೊ ಹಂಚಿಕೊಂಡಿರುವ ಆರ್ ಪಿಎಫ್, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸಂಬಂಧಿಸಿದ ಬಾಲಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆಯಲ್ಲಿ ಬಾಲಕರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ, ಪಾಲಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಎಚ್ಚರದಿಂದ ಇರಬೇಕು. ಇಂತಹ ಕೃತ್ಯಗಳಲ್ಲಿ ಭಾಗಿಯಾಗದಿರುವಂತೆ ಸರಿಯಾದ ಶಿಕ್ಷಣ ನೀಡಿ ಎಂದು ಸಲಹೆ ನೀಡಿದೆ.