ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಕಿರುತೆರೆ ನಟರಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಇವರಿಬ್ಬರೂ ಸ್ಪರ್ಧಿಸಿದ್ದರು. ಇದೀಗ ಪ್ರಸಾರ ಆಗುತ್ತಿರುವ ಹೊಸ ರಿಯಾಲಿಟಿ ಶೋ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲೂ ಇಬ್ಬರು ನಟಿಸುತ್ತಿದ್ದಾರೆ.
ಬಸವೇಶ್ವರ ನಗರ ಪೊಲೀಸ್ ಠಾಣೆ ಪಿಎಸ್‌ಐ ಆಗಿರುವ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಭಾನು ಪ್ರಕಾಶ್ ಅವರು ನೀಡಿದ ದೂರಿನ ಮೇರೆಗೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಬಂದ ಇಬ್ಬರನ್ನೂ ವಶಕ್ಕೆ ಪಡೆದು ಬಂಧಿಸಲಾಯಿತು. ಇಂದು ಬೆಳಿಗ್ಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರು ಕೈಯಲ್ಲಿ ಲಾಂಗ್ ಹಿಡಿದುಕೊಂಡು, ಕಣ್ಣಿಗೆ ಗ್ಲಾಸ್ ಹಾಕಿಕೊಂಡು ಚಿತ್ರೀಕರಿಸಿಕೊಂಡಿದ್ದಾರೆ. ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ಗಮನಿಸಿದ್ದ ಪೊಲೀಸರು ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರು ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್‌ಗಳ ಕಿರು ವಿಡಿಯೊ ಮಾಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಂನ ‘ಬುಜ್ಜಿ’ ಹೆಸರಿನ ಖಾತೆಯಲ್ಲಿ ‘ರೀಲ್ಸ್’ಗೆ ಸಿನಿಮಾವೊಂದರ ಹಾಡನ್ನೂ ಸೇರಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಶಾಂತಿಭಂಗದ ದುರ್ವರ್ತನೆ ತೋರಿದ್ದಾರೆ. ಆದ್ದರಿಂದ ಇಬ್ಬರನ್ನೂ ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ವಿಡಿಯೊ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಇಬ್ಬರಿಗೂ ಕರೆ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಆಗ ಕೆಲವೇ ಕ್ಷಣದಲ್ಲಿ ಬುಜ್ಜಿ ಖಾತೆಯಲ್ಲಿದ್ದ ವಿಡಿಯೊ ಅನ್ನು ಡಿಲಿಟ್ ಮಾಡಲಾಗಿತ್ತು. ಇಬ್ಬರೂ ತಲೆಮರೆಸಿಕೊಂಡಿದ್ದರು. ಸಂಜೆ ವೇಳೆಗೆ ವಿಚಾರಣೆಗೆ ಹಾಜರಾದಾಗ ವಶಕ್ಕೆ ಪಡೆದು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಸಾರ್ವಜನಿಕರ ಮಧ್ಯೆ ಶಸ್ತ್ರಾಸ್ತ್ರ ಹಿಡಿದು ‘ರೀಲ್ಸ್’ ಮಾಡಿದರೆ ಅದು ಅಪರಾಧ. ಭಯ ಪಡಿಸುವುದು, ಶಾಂತಿಗೆ ಭಂಗ ತರುವುದು ಕಾನೂನು ಬಾಹಿರ. ನಿಷೇಧಿತ ಶಸ್ತ್ರಾಸ್ತ್ರಗಳನ್ನು ಬಳಸುವಾಗ ಅನುಮತಿ ಪಡೆಯಬೇಕು. ಯಾವ ಕಾರಣಕ್ಕೆ ಮಾರಕಾಸ್ತ್ರ ಹಿಡಿದು ಚಿತ್ರೀಕರಣ ಮಾಡಲಾಗಿದೆ ಎಂಬುದರ ಕುರಿತು ಇಬ್ಬರಿಂದಲೂ ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.