ಅಹಮದಾಬಾದ್: ಭಾರತ ಕ್ರಿಕೆಟ್ ನ ದಂತಕಥೆ ವಿರಾಟ್ ಕೊಹ್ಲಿ ಅವರ ಭದ್ರತೆಗೆ ಸಂಬಂಧಿಸಿದಂತೆ ಗಾಬರಿ ಹುಟ್ಟಿಸುವ ವಿದ್ಯಮಾನಗಳು ನಡೆದಿದ್ದು. ರಾಜಸ್ತಾನ ಮತ್ತು ಬೆಂಗಳೂರು ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಅಭ್ಯಾಸವನ್ನು ಸ್ಥಗಿತಗೊಳಿಸಲಾಗಿದೆ.
ಭದ್ರತಾ ಸಮಸ್ಯೆಯ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪೂರ್ವಭಾವಿ ಅಭ್ಯಾಸವನ್ನು ಕೈಬಿಟ್ಟಿದೆ ಎಂದು ತಿಳಿದುಬಂದಿದೆ.
ಈ ಕುರಿತು ಗುಜರಾತ್ ನ ಆನಂದ ಬಜಾರ್ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದ್ದು, ಭದ್ರತೆಯ ದೃಷ್ಟಿಯಿಂದ ಪಂದ್ಯಪೂರ್ವದ ಪತ್ರಿಕಾಗೋಷ್ಠಿಯನ್ನು ಸಹ ರದ್ದುಗೊಳಿಸಲಾಗಿದೆ ಎಂದು ವರದಿ ಮಾಡಿದೆ.
ತಂಡದ ಅಭ್ಯಾಸ ಮತ್ತು ಪತ್ರಿಕಾಗೋಷ್ಠಿಗಳನ್ನು ರದ್ದುಗೊಳಿಸಲು ಮುಖ್ಯ ಕಾರಣ ವಿರಾಟ್ ಕೊಹ್ಲಿಯವರ ಭದ್ರತೆಯ ಕಾಳಜಿ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರಬಹುದು ಎಂಭ ಅನುಮಾನದ ಮೇರೆಗೆ ಅಹಮದಾಬಾದ್ ನಲ್ಲಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆದ ಘಟನೆ ಬೆನ್ನಲ್ಲೇ ಈ ಬೆಳವಣಿಗೆಗಳು ಸಂಭವಿಸಿವೆ.
ವಿರಾಟ್ ಕೊಹ್ಲಿಯವರ ಭದ್ರತೆಗೆ ಬೆದರಿಕೆ ಇರುವ ಕುರಿತು ಪೊಲೀಸರು ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ತಂಡ ಅಭ್ಯಾಸಕ್ಕೆ ಇಳಿಯಲೇ ಇಲ್ಲ. ಇನ್ನೊಂದೆಡೆ ರಾಜಸ್ತಾನ ತಂಡ ತನ್ನ ಅಭ್ಯಾಸ ತಾಲೀಮು ನಡೆಸುತ್ತಿದೆ.
ವಿಷಯವನ್ನು ವಿರಾಟ್ ಕೊಹ್ಲಿಯವರ ಗಮನಕ್ಕೂ ತರಲಾಗಿದೆ. ವಿರಾಟ್ ಕೊಹ್ಲಿ ರಾಷ್ಟ್ರದ ಆಸ್ತಿ. ಅವರ ಸುರಕ್ಷತೆ ನಮ್ಮ ಅತ್ಯಂತ ಮುಖ್ಯ ಆದ್ಯತೆಯ ವಿಷಯ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದ್ದಾರೆ. ಆರ್ ಸಿಬಿ ತಂಡ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡಲಿಲ್ಲ. ನಾವು ಅಭ್ಯಾಸವನ್ನು ಸ್ಥಗಿತಗೊಳಿಸುವುದಾಗಿ ಅವರು ಹೇಳಿದರು ಎಂದು ಅವರು ವಿವರಿಸಿದ್ದಾರೆ.
ಪೊಲೀಸರು ಆರ್ ಸಿಬಿ ತಂಡ ಉಳಿದುಕೊಂಡಿರುವ ಹೋಟೆಲ್ ಸುತ್ತ ಭದ್ರತೆಯನ್ನು ಹೆಚ್ಚಿಸಿದೆ. ಹೆಚ್ಚಿನ ಭದ್ರತೆಯಿಂದಾಗಿ ಐಪಿಎಲ್ ಅಕ್ರಿಡೇಷನ್ ಹೊಂದಿರುವ ಸದಸ್ಯರನ್ನೂ ಒಳಗೆ ಬಿಡಲಿಲ್ಲ ಎಂದು ತಿಳಿದುಬಂದಿದೆ. ಇನ್ನೊಂದೆಡೆ ರಾಜಸ್ತಾನ ರಾಯಲ್ಸ್ ತಂಡಕ್ಕೂ ಭದ್ರತೆ ಹೆಚ್ಚಿಸಲಾಗಿದ್ದು, ಟ್ರೈನಿಂಗ್ ನಡೆಯುತ್ತಿರುವ ಮೈದಾನಕ್ಕೆ ತೆರಳಲು ಗ್ರೀನ್ ಕಾರಿಡಾರ್ ನಿರ್ಮಿಸಿ ಸುಗಮವಾಗಿ ತಲುಪಲು ಅವಕಾಶ ಕಲ್ಪಿಸಲಾಗಿತ್ತು. ಆರ್ ಆರ್ ತಂಡದ ಪ್ರಮುಖ ಆಟಗಾರರಾದ ಆರ್ ಅಶ್ವಿನ್, ಯಜುವೇಂದ್ರ ಚಾಹಲ್ ಮತ್ತು ರಿಯಾನ್ ಪರಾಗ್ ಅಭ್ಯಾಸಕ್ಕೆ ತೆರಳದೆ ಹೋಟೆಲ್ ನಲ್ಲೇ ಉಳಿದುಕೊಳ್ಳುವ ನಿರ್ಧಾರ ಕೈಗೊಂಡರು ಎಂದು ಗೊತ್ತಾಗಿದೆ.
ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸುತ್ತಿವೆ. ಸೋತ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರನಡೆಯಲಿದೆ.