RCB ಈ ಬಾರಿಯ ಐಪಿಎಲ್‌ ಚಾಂಪಿಯನ್ಸ್‌ ಆಗುವ ಹಾಟ್‌ ಫೇವರಿಟ್:‌ ಹೇಗೆ ಗೊತ್ತೆ?

Most read

ಬೆಂಗಳೂರು: ಕಳೆದ ಶನಿವಾರ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಭರ್ಜರಿ ಜಯಗಳಿಸಿ ಪ್ಲೇ ಆಫ್‌ ಪ್ರವೇಶಿಸಿರುವ ರಾಯಲ್‌ ಚಾಲೆಂಜರ್ಸ್‌ ( RCB ) ಈ ಬಾರಿ ಕಪ್‌ ಗೆಲ್ಲಲು ಇನ್ನು ಮೂರು ಮೆಟ್ಟಿಲುಗಳನ್ನು ಹತ್ತಬೇಕಿದೆ.

ಮೇ 26 ರಂದು ನಡೆಯಲಿರುವ ಈ ಋತುವಿನ ಐಪಿಎಲ್‌ ಫೈನಲ್‌ ನಲ್ಲಿ ಕಪ್‌ ಗೆದ್ದು ಬೀಗುವ ತಂಡ ಯಾವುದು ಎಂಬ ಚರ್ಚೆ ಜೋರಾಗಿ ನಡೆದಿದ್ದು, ಯಾರೂ ಊಹಿಸದ ರೀತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸಿರುವ RCB ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

RCB ಈ ಬಾರಿ ಕಪ್‌ ಗೆದ್ದು ತನ್ನ ಹದಿನಾರು ವರ್ಷಗಳ ಚಾಂಪಿಯನ್‌ ಆಗುವ ದಾಹವನ್ನು ಹಿಂಗಿಸಿಕೊಳ್ಳುವ ತವಕದಲ್ಲಿದೆ. ಅದಕ್ಕಾಗಿ ಅದು ಇನ್ನು ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ.

ಪ್ಲೇ ಆಫ್‌ ತಲುಪಿದ ತಂಡದ ಪಟ್ಟಿಯಲ್ಲಿ RCB ನಾಲ್ಕನೇ ಮತ್ತು ಕೊನೆಯ ಸ್ಥಾನದಲ್ಲಿದೆ. ಇತರ ತಂಡಗಳು ಗೆದ್ದಷ್ಟು ಪಂದ್ಯಗಳನ್ನು ಲೀಗ್‌ ಹಂತದಲ್ಲಿ ಅದು ಗೆದ್ದಿಲ್ಲ. ಆದರೆ ಆತ್ಮವಿಶ್ವಾಸ, ಧೈರ್ಯ, ಸಾಹಸದಲ್ಲಿ ಅದು ಈಗ ನಂಬರ್‌ 1 ತಂಡ. ಅದನ್ನು ಎದುರಾಳಿಗಳೂ ಒಪ್ಪಿಕೊಳ್ಳುತ್ತಾರೆ. RCB ಗೆ ಈ ಬಾರಿ ಕಪ್‌ ನಮ್ದೇ ಎಂದು ಹೇಳುವ ಭರ್ಜರಿ ಅವಕಾಶ ದೊರೆತಿದೆ.

2008ರಲ್ಲಿ ಆರಂಭಗೊಂಡ ಐಪಿಎಲ್‌ ಪಂದ್ಯಾವಳಿಗಳಲ್ಲಿ RCB ಒಟ್ಟು ಹದಿನೇಳು ಪ್ಲೇ ಆಫ್‌ ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ. ಇದುವರೆಗೆ ನಡೆದ ಹದಿನಾರು ಪಂದ್ಯಾವಳಿಗಳಲ್ಲಿ ಎಂಟು ಬಾರಿ ಅದು ಪ್ಲೇ ಆಫ್‌ ಪ್ರವೇಶಿಸಿದೆ. ಮೂರು ಬಾರಿ ಫೈನಲ್ಸ್‌ನಲ್ಲಿ ಆಡಿದೆ. ದುರದೃಷ್ಟವಶಾತ್‌ ಮೂರು ಬಾರಿಯೂ ಅದು ಗೆಲುವಿನ ಗೆರೆಯನ್ನು ದಾಟಲು ವಿಫಲವಾಗಿದೆ.

ಈ ಬಾರಿ RCB ಐಪಿಎಲ್ ಗೆಲ್ಲುವ ನೆಚ್ಚಿನ ತಂಡವಾಗಿರುವುದಕ್ಕೆ ಹಲವು ಕಾರಣಗಳಿವೆ. ಐಪಿಎಲ್ ಮೊದಲಾರ್ಧದಲ್ಲಿ ಲೀಗ್‌ ಹಂತದ ಪಂದ್ಯಗಳನ್ನು ಹೀನಾಯವಾಗಿ ಸೋಲುತ್ತ ಬಂದಿದ್ದ RCB ದ್ವಿತೀಯಾರ್ಧದಲ್ಲಿ ಪುಟಿದು ನಿಂತ ರೀತಿಯನ್ನು ನೋಡಿ ಕ್ರಿಕೆಟ್‌ ಪ್ರೇಮಿಗಳು ಬೆರಗಾಗಿ ಹೋಗಿದ್ದಾರೆ. ಮೊದಲ ಎಂಟು ಪಂದ್ಯಗಳಲ್ಲಿ ಅದು ಗೆದ್ದಿದ್ದು ಕೇವಲ ಒಂದು ಪಂದ್ಯವನ್ನು ಮಾತ್ರ. ನಂತರದ ಆರು ಪಂದ್ಯಗಳು ಅಕ್ಷರಶಃ RCB ಪಾಲಿಗೆ ನಾಕ್‌ ಔಟ್‌ ಪಂದ್ಯಗಳೇ ಆಗಿದ್ದವು. ಒಂದು ಪಂದ್ಯ ಸೋತರೂ ಅದು ಪ್ಲೇ ಆಫ್‌ ಪ್ರವೇಶಿಸುವ ದಾರಿಯಿಂದ ಹೊರಗೆ ಉಳಿಯುತ್ತಿತ್ತು. ಅಷ್ಟೇ ಅಲ್ಲ, ತನ್ನ ಹಾಗೇ ಪ್ಲೇ ಆಫ್‌ ಪ್ರವೇಶಿಸಲು ಪ್ರಯತ್ನಿಸುವ ತಂಡಗಳಿಗಿಂತ ಹೆಚ್ಚು ನೆಟ್‌ ರನ್‌ ರೇಟ್‌ ಗಳಿಸುವ ಸವಾಲು ಕೂಡ ಅದರ ಮುಂದಿತ್ತು. RCB ಎಲ್ಲರ ಊಹೆಗಳನ್ನು ತಲೆಗೆಳಕು ಮಾಡಿ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡು ಬಂದಿತ್ತು.

RCB ಸತತ ಐದು ಪಂದ್ಯಗಳನ್ನು ಗೆದ್ದಿದ್ದರೂ ಚೆನ್ನೈ ವಿರುದ್ಧದ ಕೊನೆಯ ಪಂದ್ಯವನ್ನು ಸೋಲುತ್ತದೆ ಎಂದೇ ಕ್ರಿಕೆಟ್‌ ಪಂಡಿತರು ಭಾವಿಸಿದ್ದರು. ಸೋಲದೇ ಹೋದರೂ ಪ್ಲೇ ಆಫ್‌ ಪ್ರವೇಶಿಸಲು ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ಬೇಕಾದ ಅರ್ಹತೆ ಅದಕ್ಕೆ ದೊರೆಯುವುದಿಲ್ಲ ಎಂದೇ ಊಹಿಸಲಾಗಿತ್ತು. ಚೆನ್ನೈ ಮೇಲೆ ಗೆಲ್ಲುವುದಷ್ಟೇ ಅಲ್ಲ, ಅದು ಮೊದಲು ಬ್ಯಾಟ್‌ ಮಾಡಿದರೆ ಕನಿಷ್ಠ 18 ರನ್‌ ಗಳ ಅಂತರದಲ್ಲಿ ಗೆಲ್ಲಬೇಕಾಗಿತ್ತು. ಕೊನೆಗೆ ಬ್ಯಾಟ್‌ ಮಾಡಿದರೆ 18.1 ಓವರ್‌ ಗಳಲ್ಲಿ ಗೆಲುವಿನ ದಡ ತಲುಪಬೇಕಿತ್ತು. ಇದೆಲ್ಲ ಲೆಕ್ಕಾಚಾರವನ್ನು ನೋಡಿದ ಮೇಲೆ ಚೆನ್ನೈಯಂಥ ಬಲಿಷ್ಠ ತಂಡದ ವಿರುದ್ಧ RCB ಗೆದ್ದು ಪ್ಲೇ ಆಫ್‌ ತಲುಪಲು ಸಾಧ್ಯವೇ ಎಂದು ಮಾಜಿ ಕ್ರಿಕೆಟಿಗರು ಮೂಗು ಮುರಿದಿದ್ದರು.

ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿದ್ದೇ ಬೇರೆ. RCB ತಂಡ ಸಂಘಟಿತ ಹೋರಾಟದ ಎದುರು ಐದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ ಸೋಲಪ್ಪಿ ಮಂಡಿಯೂರಬೇಕಾಯಿತು. RCB ತಂಡದ ಆಕ್ರಮಣಕಾರಿ ಆಟದಿಂದ ಬೆಚ್ಚಿದ ಚೆನ್ನೈ ತಂಡ ಗೆಲ್ಲುವ ಕನಸನ್ನು ಕೈಬಿಟ್ಟು, ಪ್ಲೇ ಆಫ್‌ ತಲುಪುವ ಗುರಿಯನ್ನಷ್ಟೇ ಇಟ್ಟುಕೊಂಡು ಆಡಿತಾದರೂ ಕೊನೆಯ ಓವರ್‌ ಎಸೆದ ಯಶ್‌ ದಯಾಳ್‌ ಅವರ ಸಮಯಪ್ರಜ್ಞೆ ಮತ್ತು ಅತ್ಯುತ್ತಮ ಬೌಲಿಂಗ್‌ ನಿಂದ ಆ ಗುರಿಯನ್ನೂ ಮುಟ್ಟಲು ವಿಫಲವಾಯಿತು. ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು ಮಂದಿ ನೋಡಿದ ಪಂದ್ಯವಿದು. ಜಿಯೋ ಸಿನಿಮಾದಲ್ಲೇ ಸುಮಾರು 50 ಕೋಟಿಯಷ್ಟು ಮಂದಿ ಜಗತ್ತಿನಾದ್ಯಂತ ಈ ಪಂದ್ಯ ವೀಕ್ಷಿಸಿದ್ದರು.

ಈ ಪಂದ್ಯದ ನಂತರವಂತೂ RCB ಎಲ್ಲ ಎದುರಾಳಿಗೆ ನಡುಕ ಹುಟ್ಟಿಸಿರುವುದು ಸ್ಪಷ್ಟ. ಮೊದಲನೆಯದಾಗಿ ಅದು ಬುಧವಾರ ಎಲಿಮೆನೇಟರ್‌ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ತಾನ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ರಾಜಸ್ಥಾನ ತಂಡ ಪಂದ್ಯಾವಳಿಯ ಮೊದಲಾರ್ಧದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್‌ ತಲುಪಿದಾದರೂ ನಂತರ ಯಾಕೋ ಗೆಲುವಿನ ಲಯವನ್ನು ಕಳೆದುಕೊಂಡಿತು. ಸತತ ನಾಲ್ಕು ಸೋಲುಗಳ ನಂತರ ಕೋಲ್ಕತ್ತಾ ನೈಟ್‌ ರೈಡರ್ಸ್‌ ಎದುರಿನ ಕೊನೆಯ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಯಿತು. ಹೀಗಾಗಿ ಪ್ಲೇ ಆಫ್‌ ಗೆ ಪ್ರವೇಶ ಪಡೆದ ತಂಡಗಳ ಪಟ್ಟಿಯಲ್ಲಿ ಅದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. RCB ಇದೇ ಲಯದಲ್ಲಿ ಆಟವಾಡಿದರೆ ಆರ್‌ ಆರ್‌ ತಂಡ ಸುಲಭದ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ.

ಈ ಪಂದ್ಯ ಗೆದ್ದರೆ RCB ಶುಕ್ರವಾರ ಕ್ವಾಲಿಫೈಯರ್‌ ಪಂದ್ಯ ಆಡಬೇಕಾಗುತ್ತದೆ. ನಾಳೆ ನಡೆಯಲಿರುವ KKR ಮತ್ತು SRH ನಡುವಿನ ಪಂದ್ಯದಲ್ಲಿ ಸೋತ ತಂಡವನ್ನು ಅದು ಎದುರಿಸಲಿದೆ. ಎರಡೂ ಕೂಡ ಈ ಪಂದ್ಯಾವಳಿಯ ಬಲಿಷ್ಠ ತಂಡಗಳು. ಎರಡೂ ತಂಡಗಳಲ್ಲಿ ಬಹುದೊಡ್ಡ ಮ್ಯಾಚ್‌ ವಿನ್ನರ್‌ ಗಳು ಇದ್ದಾರೆ.  ಯಾರೇ ಎದುರಾಳಿಯಾದರೂ RCB ಗೆಲುವಿಗಾಗಿ ತನ್ನೆಲ್ಲ ಶಕ್ತಿಯನ್ನು ತೊಡಗಿಸಬೇಕಿದೆ. ಈ ಪಂದ್ಯವನ್ನೂ ಗೆದ್ದರೆ ಉಳಿಯುವುದು ಒಂದೇ ಮೆಟ್ಟಿಲು, ಅದು ಫೈನಲ್.‌

ಆರ್‌ ಸಿಬಿ ಪ್ಲೇ ಆಫ್‌ ನ ತನ್ನ ಎರಡೂ ಪಂದ್ಯಗಳನ್ನು ಗೆದ್ದು ಫೈನಲ್‌ ತಲುಪಿದರೆ ಅದು ದೊಡ್ಡ ಇತಿಹಾಸವೇ ಆಗಲಿದೆ. ಯಾಕೆಂದರೆ ಅದರ ಜೋಳಿಗೆಯಲ್ಲಿ ದಾಖಲೆಯ ಎಂಟು ಸತತ ಗೆಲುವುಗಳು ಇರಲಿವೆ. ಫೈನಲ್‌ ತಲುಪುವ ಯಾವುದೇ ತಂಡಕ್ಕೆ ಇಂಥ ಆಕ್ರಮಣಕಾರಿ ತಂಡದ ಎದುರು ಗೆಲ್ಲುವುದು ಸುಲಭವಲ್ಲ.

RCB ಯಶೋಗಾಥೆಯ ಹಿಂದೆ ಇರುವುದು ಅದರ ಸಾಂಘಿಕ ಪ್ರದರ್ಶನ. ಅದರ ಪ್ರತಿಯೊಬ್ಬ ಆಟಗಾರನ ಕಣ್ಣಲ್ಲಿ ಗೆಲುವಿನ ಹಸಿವನ್ನು ಕಾಣಬಹುದು. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಎಲ್ಲ ವಿಭಾಗಗಳಲ್ಲೂ ಅದು ಸದೃಢವಾಗಿ ಕಾಣುತ್ತಿದೆ. ಆರಂಭದಲ್ಲಿ ವಿರಾಟ್‌ ಕೊಹ್ಲಿ ಮತ್ತು ನಾಯಕ ಫಾಫ್‌ ಡುಪ್ಲೆಸಿ ಸ್ಫೋಟಕ ಆರಂಭ ಒದಗಿಸುತ್ತಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ರಜತ್‌ ಪಟೀದಾರ್‌, ಕ್ಯಾಮರೂನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌ ರಂಥ ಮ್ಯಾಚ್‌ ವಿನ್ನರ್‌ ಗಳ ಶಕ್ತಿ ಅದಕ್ಕಿದೆ. ಕೆಳಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಹಿಡಿದು ನಿಲ್ಲಿಸುವುದು ಬಲುಕಷ್ಟ. ಹೀಗಾಗಿ ಬಲಿಷ್ಠ ಬ್ಯಾಟಿಂಗ್‌ ಪಡೆ RCB ಯದ್ದಾಗಿದೆ.

ಇನ್ನು ಬೌಲಿಂಗ್‌ ವಿಭಾಗವೂ ಈಗ ಸದೃಢವಾಗಿದೆ. ಮಹಮದ್‌ ಸಿರಾಜ್‌ ಮತ್ತು ಲಾಕಿ ಫರ್ಗ್ಯೂಸನ್‌ ಎದುರಾಳಿ ಬ್ಯಾಟರ್‌ ಗಳನ್ನು ಕಕ್ಕಾಬಿಕ್ಕಿಗೊಳಿಸಬಲ್ಲ ಶಕ್ತಿ ಉಳ್ಳವರು. ಕರಣ್‌ ಶರ್ಮಾ ಮತ್ತು ಸ್ವಪ್ನಿಲ್‌ ಸಿಂಗ್‌ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುತ್ತಿದ್ದಾರೆ. ಕ್ಯಾಮರೂನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌ ಅವರುಗಳು ಕೂಡ ಲಯ ಕಂಡಿರುವುದು ಎದುರಾಳಿಗಳಿಗೆ ನಡುಕ ಹುಟ್ಟಿಸಿದೆ.

ಹೇಗೆ ನೋಡಿದರೂ ರಾಯಲ್‌ ಚಾಲೆಂಜರ್ಸ್‌ ಆಫ್‌ ಬೆಂಗಳೂರು ಈ ಬಾರಿ ಐಪಿಎಲ್‌ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿದೆ. ಮೇ 26ರ ಭಾನುವಾರ ಇದೇ ತಂಡ ಕಪ್‌ ಗೆದ್ದು, ʻಈ ಸಲ ಕಪ್‌ ನಮ್ದೇʼ ಎಂಬ ಅಭಿಮಾನಿಗಳ ಹದಿನೇಳು ವರ್ಷಗಳ ಬಯಕೆಯನ್ನು ಈಡೇರಿಸುವ ಸಾಧ್ಯತೆ ಹೆಚ್ಚಾಗಿದೆ. ಒಂದೊಮ್ಮೆ ಗೆದ್ದರೆ ವಿಶ್ವಕಪ್‌ ಗೆದ್ದಾಗ ಸಚಿನ್‌ ತೆಂಡೂಲ್ಕರ್‌ ಅವರನ್ನು ಭಾರತ ಕ್ರಿಕೆಟ್‌ ತಂಡದ ಆಟಗಾರರು ಹೆಗಲ ಮೇಲೆ ಹೊತ್ತು ವಿಜೃಂಭಿಸಿದ ಹಾಗೆ ವಿರಾಟ್‌ ಕೊಹ್ಲಿ ಅವರನ್ನು ಹೊತ್ತು ಸಂಭ್ರಮಿಸುವುದನ್ನು ನಾವು ನೋಡಬಹುದಾಗಿದೆ.

ಇನ್ನೂ ಆಡುವಾಗಲೇ ಕ್ರಿಕೆಟ್‌ ಜಗತ್ತಿನ ದಂತಕಥೆಯಾಗಿಹೋಗಿರುವ ವಿರಾಟ್‌ ಕೊಹ್ಲಿ ಅವರಿಗೆ ಇದೊಂದು ಕಪ್‌ ಎತ್ತಿಹಿಡಿಯುವುದು ಬೇಕಾಗಿದೆ. ಅದಕ್ಕೆ ಅವರು ಅರ್ಹರೂ ಕೂಡ. ಆ ಕನಸು ನನಸಾಗುವುದೇ ಎಂದು ಕಾದುನೋಡಬೇಕಿದೆ.

More articles

Latest article