ಶಿಗ್ಗಾಂವಿ ಕ್ಷೇತ್ರದಿಂದ ರವಿಕೃಷ್ಣಾರೆಡ್ಡಿ ಸ್ಪರ್ಧೆ! ಉಪಚುನಾವಣೆಗೆ ಹೊಸ ರಂಗು

Most read

ಶಿಗ್ಗಾಂವಿ: ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ‌ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸ್ಪರ್ಧೆಗೆ ನಿಶ್ಚಯಿಸಿದ್ದು ಹೊಸ ಸಂಚಲನಕ್ಕೆ‌ ಕಾರಣವಾಗಿದೆ.

ರವಿಕೃಷ್ಣಾರೆಡ್ಡಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಲಿದ್ದು ತ್ರಿಕೋನ ಸ್ಪರ್ಧೆ ಏರ್ಪಡುವುದು ನಿಶ್ಚಿತವಾಗಿದೆ.

KRS ಪಕ್ಷದ‌ ಸಂಸ್ಥಾಪಕರೂ, ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್ ಆದ ರವಿಕೃಷ್ಣಾರೆಡ್ಡಿ ಈ ಭಾಗದಲ್ಲಿ ಅಪಾರ ಜನಪ್ರಿಯರಾಗಿದ್ದು, ಪಕ್ಷದ ಒತ್ತಾಸೆಯಿಂದ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ KRS ಪಕ್ಷ‌ ಶಿಗ್ಗಾಂವಿಯಲ್ಲಿ ಇತರ ಪಕ್ಷಗಳಿಗಿಂತ ಮೊದಲೇ ಚುನಾವಣಾ ತಯಾರಿ ಆರಂಭಿಸಿದೆ.

ರಾಜ್ಯದಲ್ಲಿ ಎಲ್ಲ ಹಂತಗಳ ಭ್ರಷ್ಟಾಚಾರದ ವಿರುದ್ಧ ಹಲವಾರು ದಶಕಗಳಿಂದ ಸಮರ ಸಾರಿರುವ ರವಿಕೃಷ್ಣಾರೆಡ್ಡಿ ಅಮೆರಿಕದಿಂದ ಹಿಂದಕ್ಕೆ ಬಂದ ನಂತರ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತದನಂತರ ಆಮ್ ಆದ್ಮಿ ಪಾರ್ಟಿ ಸೇರ್ಪಡೆಯಾಗಿದ್ದ ಅವರು ಅಲ್ಲಿನ ಆಂತರಿಕ‌ ತಿಕ್ಕಾಟದಿಂದ‌ ಹೊರಗೆ ಬಂದು ಕರ್ನಾಟಕ ರಾಷ್ಟ್ರ ಸಮಿತಿ ಸ್ಥಾಪಿಸಿದ್ದರು.

ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ KRS ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರಾದರೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಸಲುವಾಗಿ ರವಿಕೃಷ್ಣಾರೆಡ್ಡಿ ಸ್ಪರ್ಧಿಸಿರಲಿಲ್ಲ. ಈಗ ಸಂಸದರಾಗಿ ಆಯ್ಕೆಯಾದವರು ರಾಜೀನಾಮೆ ಸಲ್ಲಿಸಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಪೈಕಿ ಶಿಗ್ಗಾಂವಿಯಲ್ಲಿ ಮಾತ್ರ KRS ಅಭ್ಯರ್ಥಿಯನ್ನಾಗಿ ರವಿಕೃಷ್ಣಾರೆಡ್ಡಿಯವರನ್ನು ಕಣಕ್ಕಿಳಿಸಲಾಗುತ್ತಿದೆ. ರಾಜ್ಯಾದ್ಯಂತ ಇರುವ KRS ಮುಖಂಡರು, ಕಾರ್ಯಕರ್ತರು ಶಿಗ್ಗಾಂವಿಗೆ ಬಂದು ಭರ್ಜರಿ ಪ್ರಚಾರ ನಡೆಸುವ ಯೋಜನೆ ಹಮ್ಮಿಕೊಂಡಿದ್ದು, ಈ ಬಾರಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಇತರ ರಾಜಕೀಯ ಪಕ್ಷಗಳಿಂದ ಭಿನ್ನವಾದ ನೀತಿ ನಿಲುವುಗಳಿಂದಾಗಿ ಕರ್ನಾಟಕದ ಗಮನ ಸೆಳೆದಿರುವ KRS ಪಕ್ಷ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ನೌಕರರ ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮೂಲಕವೇ ಜನಪ್ರಿಯತೆ ಗಳಿಸಿತ್ತು.

ಸ್ವಚ್ಛ, ಪಾರದರ್ಶಕ, ಪ್ರಾಮಾಣಿಕ, ಜನಪರ ಆಡಳಿತ ನೀಡಬೇಕು. ನಾಡು-ನುಡಿಯ ರಕ್ಷಣೆಯೊಂದಿಗೆ ಪ್ರಾದೇಶಿಕ‌ ಅಸ್ಮಿತೆ ಉಳಿಸಿಕೊಳ್ಳಬೇಕು ಎಂಬ ಉದ್ದೇಶವಿಟ್ಟುಕೊಂಡು KRS ಪಕ್ಷ ಕಾರ್ಯನಿರ್ವಹಿಸುತ್ತಿದೆ.

More articles

Latest article