ಯಡ್ರಾಮಿ: ಐದನೇ ತರಗತಿ ಓದುತ್ತಿರುವ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕ ಹಾಜಿಮಲಂಗ ಗಣಿಯಾರ ಎಂಬ ಶಿಕ್ಷಕನನ್ನು ಯಡ್ರಾಮಿ ಪೊಲೀಸ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಜಿಮಲಂಗ ಅವರು ಶಾಲಾ ತರಗತಿಗಳು ಮುಗಿದ ಬಳಿಕ ಟ್ಯೂಷನ್ ಮಾಡುತ್ತಿದ್ದರು. ಇದಕ್ಕಾಗಿ ಕೆಲವು ಮಕ್ಕಳನ್ನು ರಾತ್ರಿ ಶಾಲೆಯಲ್ಲೇ ಉಳಿಸಿಕೊಂಡು ಬೆಳಿಗ್ಗೆ ಮನೆಗೆ ಕಳುಹಿಸುತ್ತಿದ್ದರು.
ಮೇ ತಿಂಗಳಲ್ಲಿ 11 ವರ್ಷದ ಬಾಲಕಿಗೆ ರಕ್ತಸ್ರಾವವಾಗಿತ್ತು. ಮಗಳಿಗೆ ಮುಟ್ಟು ಆರಂಭವಾಗಿರಬಹುದು ಎಂದು ಪೋಷಕರು ಭಾವಿಸಿದ್ದರು ಮತ್ತು ಎಂದಿನಂತೆ ಮಗಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಅಂದಿನ ರಕ್ತಸ್ರಾವ ಅತ್ಯಾಚಾರದಿಂದ ಆಗಿದೆ ಎನ್ನುವುದು ತಡವಾಗಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಗೆ ಹೆಚ್ಚಿನ ಅಂಕದ ಆಮಿಷವೊಡ್ಡಿದ್ದ ಹಾಜಿಮಲಂಗ, ಜೀವ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ್ದರು. ಮನೆಯಲ್ಲಿ ಯಾರಿಗೂ ತಿಳಿಸದಂತೆ ಬೆದರಿಕೆಯನ್ನೂ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ..
ನವೆಂಬರ್ 29ರ ರಾತ್ರಿ ಮತ್ತೊಮ್ಮೆ ಬಾಲಕಿಯನ್ನು ಸಿಬ್ಬಂದಿ ಕೋಣೆಗೆ ಕರೆದೊಯ್ದು ಶಿಕ್ಷಕ ಅತ್ಯಾಚಾರ ಎಸಗಿದ್ದ. ಬಾಲಕಿಯು ಈ ಬಗ್ಗೆ ತನ್ನ ಪರಿಚಯ ಇರುವವರಿಗೆ ತಿಳಿಸಿದ್ದಳು. ಶಾಲೆಯಲ್ಲಿ ಕೆಲಸ ಮಾಡುವ ಆಯಾ ಮತ್ತು ಶಿಕ್ಷಕಿಯೊಬ್ಬರಿಗೆ ಈ ವಿಷಯ ತಿಳಿಸಿದ್ದಾಳೆ. ಅವರು ಮಾಹಿತಿ ನೀಡಿದ ನಂತರವಷ್ಟೇ ಬಾಲಕಿಯ ಪೋಷಕರ ಗಮನಕ್ಕೆ ಬಂದಿದೆ. ಆಗ ಪೋಷಕರು ನೀಡಿದ ದೂರಿನನ್ವಯ ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಯಡ್ರಾಮಿಯಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಶಾಲಾ ಕಾಲೇಜುಗಳೂ ತೆರೆದಿರಲಿಲ್ಲ. ಶಾಸಕ ಡಾ.ಅಜಯ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡದ ನಂತರ ಪ್ರತಿಭಟಟನೆಯನ್ನು ಕೈ ಬಿಡಲಾಗಿದೆ.