ಬೆಂಗಳೂರು: ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜತೆಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ.
ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಈ ಸಂಬಂಧ ಕಾಯ್ದಿರಿಸಿದ್ದ ಆದೇಶದ ಭಾಗವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಕಿಕ್ಕಿರಿದು ತುಂಬಿದ್ದ ತೆರೆದ ನ್ಯಾಯಾಲಯದಲ್ಲಿ (ಸಿಸಿಸಿಎಚ್–82) ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಆರೋಪಿ ವಿರುದ್ಧದ ಭಾರತೀಯ ದಂಡ ಸಂಹಿತೆ–1860 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ವಿವಿಧ ಕಲಂಗಳ ಅಡಿಯಲ್ಲಿನ ದೋಷಾರೋಪಗಳು ವಿಚಾರಣೆಯಲ್ಲಿ ಸಾಬೀತಾಗಿವೆ. ಆದ್ದರಿಂದ ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಇಂದು (ಶನಿವಾರ) ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ನಿನ್ನೆ ಶುಕ್ರವಾರ ಘೋಷಿಸಿದ್ದರು.
ಇಂದು ಬೆಳಗ್ಗೆ ನ್ಯಾಯಾಧೀಶರ ಮುಂದೆ ಪ್ರಜ್ವಲ್ ರೇವಣ್ಣನನ್ನು ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ನನ್ನ ರಾಜಕೀಯ ಜೀವನವನ್ನು ಮುಗಿಸಲು ಸಂಚು ರೂಪಿಸಲಾಗಿದೆ. ಆದ್ದರಿಂದ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಪ್ರಾಸಿಕ್ಯೂಷನ್ ಪರ ವಕೀಲ ಜಗದೀಶ್ ಜೀವಾವಧಿ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ಸಂತ್ರಸ್ತೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದವಳು. ಆಕೆಯನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಆ ಕ್ರೌರ್ಯವನ್ನು ವಿಡಿಯೋ ರೆಕಾರ್ಡ್ ಸಹ ಮಾಡಿದ್ದಾನೆ. ವಿಡಿಯೋ ನೋಡಿದರೆ ಕೃತ್ಯದ ತೀವ್ರತೆ ಸ್ಪಷ್ಟವಾಗಿದೆ. ರೂ.10,000 ಸಂಬಳಕ್ಕೆ ಇವರು ಕೆಲಸ ಮಾಡುತ್ತಿದ್ದರು. ಮಹಿಳೆ ಶಿಕ್ಷಿತಳಲ್ಲ. ಬಡ ಕೂಲಿ ಕೆಲಸದ ಮಹಿಳೆ. ಆದ್ದರಿಂದ ಜೀವಾವಧಿ ಶಿಕ್ಷೆಗೆ ಪ್ರಜ್ವಲ್ ರೇವಣ್ಣ ಯೋಗ್ಯ ಎಂದು ವಾದಿಸಿದರು.
ಹಣ, ಅಧಿಕಾರ ಇರುವವರಿಗೆ ಕಡಿಮೆ ಶಿಕ್ಷೆ ಆಗಬಾರದು. ಈ ಪ್ರಕರಣ ಸಮಾಜಕ್ಕೆ ಒಂದು ಪಾಠ ಆಗಬೇಕು. ಕಠಿಣ ಶಿಕ್ಷೆ ನೀಡಿ ಸಮಾಜಕ್ಕೆ ಸಂದೇಶ ನೀಡಬೇಕು. ಸಾಕ್ಷ್ಯ ನಾಶಕ್ಕೂ ಯತ್ನಿಸಿರುವುದು ಗಂಭೀರ ಅಪರಾಧ. ಅಪರಾಧಿ ಬಹಳಷ್ಟು ಜನರ ವಿಡಿಯೋ ಚಿತ್ರೀಕರಿಸಿದ್ದಾನೆ. ಈತ ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ತೋರಿಲ್ಲ. ಜೀವಾವಧಿ ಶಿಕ್ಷೆಗೆ ಇದು ಅತ್ಯಂತ ಸೂಕ್ತ ಪ್ರಕರಣ ಎಂದರು.
ಪ್ರಜ್ವಲ್ ಪರ ವಕೀಲೆ ನಳಿನಾ ಮಾಯಗೌಡ ವಾದಿಸಿ ಇಡೀ ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ಪ್ರಜ್ವಲ್ ಕಡಿಮೆ ವಯಸ್ಸಿನಲ್ಲೇ ಸಂಸದರಾಗಿದ್ದರು. ಪ್ರಜ್ವಲ್ ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನ ನಡೆಸಲಾಗಿದೆ ಎಂದರು.
ಪ್ರಜ್ವಲ್ ಗೆ 34 ವರ್ಷ, ವಯಸ್ಸನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಆತನ ಜೀವನ ಜೈಲಿನಲ್ಲೇ ಮುಗಿದು ಹೋಗಬಾರದು. ಆತನ ರಾಜಕೀಯ ಭವಿಷ್ಯವನ್ನೂ ಕೋರ್ಟ್ ನೋಡಬೇಕು. ಸಂತ್ರಸ್ತೆಗೆ ಮದುವೆಯಾಗಿ ಮಕ್ಕಳಿದ್ದಾರೆ. ಕುಟುಂಬದ ಜೊತೆ ಸುಖಿ ಸಂಸಾರ ನಡೆಸುತ್ತಿದ್ದಾರೆ. ಪ್ರಜ್ವಲ್ ಇನ್ನೂ ಯುವಕ, ಆತನ ಭವಿಷ್ಯ ಗಮನದಲ್ಲಿಟ್ಟುಕೊಳ್ಳಿ ಈಗಾಗಲೇ ಪ್ರಜ್ವಲ್ ತೇಜೋವಧೆ ಆಗಿದೆ. ಅರೆಸ್ಟ್ ಅದಾಗಿನಿಂದಲೂ ಜೈಲಿನಲ್ಲೇ ಇದ್ದಾನೆ ಎಂದು ಮನವಿ ಮಾಡಿಕೊಂಡರು. ನಂತರ ನ್ಯಾಯಾಲಯ ಮಧ್ಯಾಹ್ನ 2.45ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು.
ಪ್ರಕರಣದ ವಿವರ:
2024ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ನದ್ದು ಎನ್ನಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಸಾವಿರಾರು ವಿಡಿಯೊಗಳು ಹಾಗೂ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು ಮತ್ತು ಪೆನ್ ಡ್ರೈವ್ ಮೂಲಕ ಲಭ್ಯವಾಗಿತ್ತು. ಈ ವಿಡಿಯೊಗಳ ಪೈಕಿ 48 ವರ್ಷದ ಸಂತ್ರಸ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಿಡಿಯೊ ಒಂದಾಗಿತ್ತು.
ಈ ಅಶ್ಲೀಲ ವಿಡಿಯೊ ಗಳು ವ್ಯಾಪಕವಾಗಿ ಬಿತ್ತರಗೊಂಡ ಸಂದರ್ಭದಲ್ಲೇ ಹಾಲಿ ಪ್ರಕರಣದ ಸಂತ್ರಸ್ತೆ, ತಮ್ಮ ಮನೆಯಿಂದ ಕಣ್ಮರೆಯಾಗಿದ್ದರು. ಸಂತ್ರಸ್ತೆಯ ಪುತ್ರ 2024ರ ಮೇ 2ರಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ, ಪ್ರಜ್ವಲ್ ತಂದೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮತ್ತು ಸಂಬಂಧಿ ಸತೀಶ್ ಬಾಬಣ್ಣ ವಿರುದ್ಧ ನನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ಸಂತ್ರಸ್ತೆಯು ತೋಟದ ಮನೆಯೊಂದರಲ್ಲಿ ಇದ್ದುದನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಸಂತ್ರಸ್ತೆಯು ಪ್ರಜ್ವಲ್ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ, ಭಾರತೀಯ ದಂಡ ಸಂಹಿತೆ–1860ರ ಕಲಂ 376(2)(ಕೆ), 376(2)(ಎನ್), 354(ಎ)(ಬಿ)(ಸಿ), 506, 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66(ಇ) ಅಡಿ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಬಳಿಕ ಸಂತ್ರಸ್ತೆಯನ್ನು ಸಕ್ಷಮ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 164ರ ಅಡಿ ಹೇಳಿಕೆ ದಾಖಲು ಮಾಡಿಸಲಾಗಿತ್ತು.
ಬಿ.ಕೆ. ಸಿಂಗ್ ನೇತೃತ್ವದ ಎಸ್ಐಟಿ
ಪ್ರಕರಣದ ತನಿಖೆ ನಡೆಸಲು ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲಾಗಿತ್ತು. ತಂಡದಲ್ಲಿ ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್, ಸೀಮಾ ಲಾಟ್ಕರ್ ಹಾಗೂ ಬಿ.ಸುಮಾರಾಣಿ ಅವರು ಇದ್ದರು.