ರನ್ಯಾ ರಾವ್‌ ಚಿನ್ನ ಕಳ್ಳ ಸಾಗಾಣೆ, ಪೊಲೀಸರ ಲೋಪ; ಸಿಐಡಿ ತನಿಖೆಗೆ ಆದೇಶ

Most read

ಬೆಂಗಳೂರು: ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ನಟಿ ರನ್ಯಾ ರಾವ್ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣವನ್ನು  ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.

 ಶೀಘ್ರದಲ್ಲೇ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.

ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆಯ ಮೂಲಕ ತಂದ ಬಳಿಕ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರನ್ಯಾ ರಾವ್ ಸುಲಭವಾಗಿ ಹೊರಕ್ಕೆ ಬರುತ್ತಿದ್ದರು. ಇವರಿಗೆ ಪೊಲೀಸರು ನೆರವು ನೀಡುತ್ತಿದ್ದರು. ರನ್ಯಾರಾವ್‌ ಪೊಲೀಸ್ ಇಲಾಖೆ ವಾಹನವನ್ನು ಬಳಸುತ್ತಿದ್ದರು. ಡಿಆರ್‌ಐ ತನಿಖೆ ವೇಳೆ ಇದು ಪತ್ತೆಯಾಗಿದೆ.

ಶಿಷ್ಟಾಚಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳ  ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ರಾಜ್ಯ ಪೊಲೀಸ್ ಗೃಹ ನಿರ್ಮಾಣ ಹಾಗೂ ಮೂಲ ಸೌಕರ್ಯದ ವ್ಯವಸ್ಥಾಪಕ ನಿರ್ದೇಶಕ (ಡಿಜಿಪಿ) ಕೆ‌. ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಗುಪ್ತ ಅವರನ್ನು ನೇಮಿಸಲಾಗಿದೆ. ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ. ಚಿತ್ರನಟಿ ರನ್ಯಾರಾವ್‌ ಅವರು ತಮ್ಮ ಮಲ ತಂದೆ ರಾಮಚಂದ್ರರಾವ್‌ ಹೆಸರನ್ನು ಬಳಸಿಕೊಂಡು ಯಾವುದೇ ತಪಾಸಣೆಗೆ ಒಳಪಡದೆ ಸುಲಭವಾಗಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದರು.  

More articles

Latest article