ಬೆಂಗಳೂರು: ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ತುರ್ತಾಗಿ ತಮ್ಮ ಕಚೇರಿಗೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರ ನಟಿ ರನ್ಯಾ ರಾವ್ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವರು ಸದನದಲ್ಲಿ ಹಾಜರಿದ್ದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ವಿಧಾನಸಭೆಯ ಮೊಗಸಾಲೆಯಲ್ಲಿರುವ ತಮ್ಮ ಕಚೇರಿಗೆ ಬಂದರು. ತುರ್ತಾಗಿ ಅಲ್ಲಿಗೆ ಬರುವಂತೆ ಪರಮೇಶ್ವರ ಅವರಿಗೆ ಸಂದೇಶ ಕಳುಹಿಸಿದರು.
ಸದನದಿಂದ ಹೊರ ಹೋದ ಗೃಹ ಸಚಿವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಸುಮಾರು ಹತ್ತು ನಿಮಿಷ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರೊಂದಿಗೆ ಕೆಲವೇ ಮಂದಿ ಮಾತ್ರ ಇದ್ದರು.
ರನ್ಯಾ ರಾವ್ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜಕೀಯ ನಂಟಿನ ಕುರಿತು ತೀವ್ರ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರದ ಹಂತದಲ್ಲಿ ಆಗಿರಬಹುದಾದ ಲೋಪಗಳ ಬಗ್ಗೆ ಮುಖ್ಯಮಂತ್ರಿಯವರು ಗೃಹ ಸಚಿವರಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.