ಬೆಂಗಳೂರು: ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ, ಫಕೀರ್ ಮುಹಮ್ಮದ್ ಕಟ್ಟಾಡಿ ಲೇಖನದ ‘ರಂಜಾನ್’ ಸಿನಿಮಾವು ದೂರದ ದುಬೈನಲ್ಲಿ ಬಿಡುಗಡೆಯಾಗಿ ಪ್ರಶಂಸೆಗೆ ಪಾತ್ರವಾಗಿದೆ. ಚಿತ್ರದ ನಾಯಕ ಸಂಗಮೇಶ್ ಉಪಾಸೆ ಅಭಿನಯಕ್ಕಾಗಿ ಯೂನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಹಾಗೂ ಜಿನಿಸಿಸ್ ಅಲ್ಟಿಯಾ ಹದಿನಾಲ್ಕನೇ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ದಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಸಾಗರದಾಚೆಗೂ ಇಲ್ಲಿನ ಚಿತ್ರಕ್ಕೆ ಗೌರವ ದೊರೆತಿರುವುದಕ್ಕೆ ಸಾಕ್ಷಿ ಇದಾಗಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಡೊಂಗಿ, ಜಪಾನ್, ಕೀನ್ಯಾ, ಟರ್ಕಿ ಇನ್ನು ಮುಂತಾದ ದೇಶಗಳಿಂದ ಚಲನಚಿತ್ರ, ಕಿರುಚಿತ್ರ, ಮ್ಯೂಸಿಕಲ್ ಆಲ್ಬಂ, ಸಾಕ್ಷಾಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ‘ರಂಜಾನ್’ ಸಿನಿಮಾಕ್ಕೆ ವಿಶೇಷ ಮನ್ನಣೆ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಪಂಚಾಕ್ಷರಿ. ಸಿ.ಈ ನಿರ್ದೇಶನದಲ್ಲಿ ಯೂನಿವರ್ಸಲ್ ಸ್ಟುಡಿಯೋ ಮೂಲಕ ಮಡಿವಾಳಪ್ಪ.ಎಂ.ಗೂಗಿ ಬಂಡವಾಳ ಹೂಡಿದ್ದರು.
ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್, ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆಯನ್ನು, ಉಳ್ಳವರು ಮತ್ತು ಇಲ್ಲದವರ ಎರಡು ಕುಟುಂಬಗಳ ಮಧ್ಯೆ ಹೋಲಿಕೆ ಮಾಡುವ ಸನ್ನಿವೇಶಗಳು ನೋಡುಗರ ಮನತಟ್ಟಿತ್ತು. ಪತ್ನಿಯಾಗಿ ಪ್ರೇಮಾವತಿ ಉಪಾಸೆ, ಮಗಳಾಗಿ ಬೇಬಿ ಈಶಾನಿ ಉಪಾಸೆ, ಮಗನಾಗಿ ಮಾಸ್ಟರ್ ವೇದಿಕ್ ಉಳಿದಂತೆ ಭಾಸ್ಕರ್ ಮಣಿಪಾಲ್, ಮಾಸ್ಟರ್ ನೀಲ್, ಜಯಲಕ್ಷಿ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾಭಟ್ ಮುಂತಾದವರು ನಟಿಸಿದ್ದಾರೆ. ಸಂಗೀತ ಇಂದ್ರ, ಛಾಯಾಗ್ರಹಣ ರಂಗಸ್ವಾಮಿ.ಜಿ, ಸಂಕಲನ ಡಿ.ಮಲ್ಲಿ, ಮಿಕ್ಸಿಂಗ್ ಪಳನಿ.ಡಿ. ಸೇನಾಪತಿ ಅವರದಾಗಿದೆ.