ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಮಹತ್ವದ ಪ್ರಗತಿ ಸಾಧಿಸಿದ್ದು, ಬಾಂಬ್ ಇಟ್ಟುಹೋದ ಆರೋಪಿ ಮತ್ತು ಸ್ಫೋಟದ ರೂವಾರಿಯನ್ನು ಬಂಧಿಸಿದ್ದಾರೆ.
ಕೆಫೆಯಲ್ಲಿ ಬಂದು ಬಾಂಬ್ ಇಟ್ಟು ಹೋದ ಮುಸಾವಿರ್ ಹುಸೇನ್ ಶಾಜೆಬ್ ಮತ್ತು ರೂವಾರಿ ಅಬ್ದುಲ್ ಮಥೀನ್ ತಾಹಾ ಇಬ್ಬರನ್ನು ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಕಾಂತಿ ಎಂಬಲ್ಲಿ ಬಂಧಿಸಿದ್ದಾರೆ.
ಇಬ್ಬರೂ ಆರೋಪಿಗಳು ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಎನ್ ಐಎ ಇಬ್ಬರ ಬಂಧನಕ್ಕೆ ವ್ಯಾಪಕ ಕಾರ್ಯಾಚರಣೆ ನಡೆಸಿತ್ತು.
ಬ್ಯಾಗ್ ಒಂದರಲ್ಲಿ ಬಾಂಬ್ ಇಟ್ಟು ಕೆಫೆಯಲ್ಲಿ ಇಟ್ಟುಹೋದ ಶಾಜೆಬ್ ನಂತರ ಯಾರ ಕಣ್ಣಿಗೂ ಕಾಣದಂತೆ ಮಾಯವಾಗಿದ್ದ. ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾದ ಅಬ್ದುಲ್ ಮಥೀನ್ ತಾಹಾ ಮೊದಲಿನಿಂದಲೂ ಎನ್ ಐಎ ಗೆ ಬೇಕಾಗಿದ್ದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ರೂವಾರಿ ಮುಜಾಮಿಲ್ ಶರೀಫ್ ಎಂಬಾತನನ್ನು ಮಾರ್ಚ್ 26ರಂದು ಬಂಧಿಸಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಕೋಲ್ಕತ್ತಾಗೆ ತೆರಳಿದ ಇಬ್ಬರು ವ್ಯಕ್ತಿಗಳು ನಕಲಿ ಹೆಸರುಗಳಲ್ಲಿ ಓಡಾಡುತ್ತಿರುವುದನ್ನು ಎನ್ ಐಎ ಪತ್ತೆ ಹಚ್ಚಿತ್ತು. ಎನ್ ಐಎ ಮತ್ತು ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ಮತ್ತು ಕೇರಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಶಾಜೆಬ್ ಮತ್ತು ತಾಹಾ ಇಬ್ಬರ ಐಡೆಂಟಿಟಿಗಳೂ ಬಯಲಾಗಿದ್ದು, ಇಬ್ಬರೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಕರ್ನಾಟಕದ 18 ನಗರ, ಪಟ್ಟಣಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತ್ತು.
ಮಾರ್ಚ್ 1ರಂದು ಸಂಭವಿಸಿದ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಸುಮಾರು ಹತ್ತು ಮಂದಿ ಗ್ರಾಹಕರು ಗಾಯಗೊಂಡಿದ್ದರು.
ಘಟನೆಯ ನಂತರ ಬಾಂಬರ್ ನ ಹಲವು ಫೊಟೋಗಳು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿ, ಬಂಧನಕ್ಕೆ ಸಾರ್ವಜನಿಕರಿಂದ ನೆರವು ಕೋರಲಾಗಿತ್ತು.