ಪೌರ ಕಾರ್ಮಿಕರು, ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ವೈದ್ಯಕೀಯ ತಪಾಸಣೆ ಅಗತ್ಯ: KSSKDC ನಿರ್ದೇಶಕರು

Most read

ಮಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಮತ್ತು ಪೌರ ಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮೆ ಆಯಾ ತಾಲೂಕುಗಳ ಮಟ್ಟದಲ್ಲಿಯೇ ವೈದ್ಯಕೀಯ ತಪಾಸಣೆ ಮಾಡಿಸುವ ಮೂಲಕ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಅವರಿಗೆ ಅಪಘಾತ ಹಾಗೂ ಜೀವ ವಿಮೆಗಳನ್ನು ಕಡ್ಡಾಯವಾಗಿ ಆಯಾ ತಾಲೂಕಿನ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮಾಡಿಸಿಕೊಡಬೇಕು ಎಂದು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಪರ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಾದ ಚಂದ್ರಕಲಾ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆ. 12ರ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಗುರುತಿಸಲಾದ ಮಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಮತ್ತು ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಖಾಯಂಗೊಂಡ ಸಫಾಯಿ ಕರ್ಮಚಾರಿಗಳಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಗೃಹಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೂ 7.50 ಲಕ್ಷ ರೂ.ಗಳನ್ನು ನೀಡುತ್ತಿದೆ, ಇದರಲ್ಲಿ ರಾಜ್ಯ ಸರ್ಕಾರ 6 ಲಕ್ಷ ರೂ.ಗಳನ್ನು ಭರಿಸಲು ಸಿದ್ಧವಿದ್ದು, ಬಾಕಿ ಉಳಿದ 1.50ಲಕ್ಷ ರೂ. ಗಳನ್ನು ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತದೆ, ಇದರ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳು ಶ್ರಮಿಸಬೇಕೆಂದರು.

ರಾಮನಗರ, ಬಿಡದಿ, ಹಾರೋಹಳ್ಳಿ ತಾಲೂಕುಗಳಲ್ಲಿ ಪೌರಕಾರ್ಮಿಕರಿಗೆ ನಿವೇಶನಗಳನ್ನು ಒದಗಿಸುವುದಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಚನ್ನಪಟ್ಟಣ ಮಾಗಡಿ ಹಾಗೂ ಕನಕಪುರ ತಾಲೂಕುಗಳಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಲು ತುರ್ತಾಗಿ ಸ್ಥಳ ಗುರುತು ಮಾಡುವಂತೆ ಅವರು ಸೂಚಿಸಿದರು.

ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಘದ ಶಾಲೆಗಳಲ್ಲಿ ಪ್ರವೇಶ ನೀಡುವ ಅಗತ್ಯವಿದೆ, ಈ ದಿಸೆಯಲ್ಲಿ ಕ್ರಮವಹಿಸಬೇಕು, ಈಗಾಗಲೇ ಮ್ಯಾನುಯಲ್ ಸ್ಕಾö್ಯವೆಂಜರ್ ಗಳಾಗಿ ಕೆಲಸ ಮಾಡಿ ನಿಲ್ಲಿಸಿದವರನ್ನು ಗುರುತಿಸಿ ಅವರಿಗೆ ಪರ್ಯಾಯ ಉದ್ಯೋಗವನ್ನು ಒದಗಿಸಲು ಅವರ ಆಸಕ್ತಿ ವಲಯದ ಆಧಾರದ ಮೇಲೆ ಸೂಕ್ತ ಕೌಶಲ್ಯ ತರಬೇತಿಗಳನ್ನು ನೀಡಬೇಕು ಎಂದರು.

ಈ ಕೌಶಲ್ಯ ತರಬೇತಿಯು ಅವರು ಆರ್ಥಿಕವಾಗಿ ಸಬಲರಾಗುವವರೆಗೆ ಪರ್ಯಾಯ ಉದ್ಯೋಗ ಪಡೆಯಲು ಅನುಕೂಲವಾಗುವಂತಿರಬೇಕು ಕರ್ನಾಟಕ ಸಪಾಯಿ ಕರ್ಮಚಾರಿ ಆಯೋಗದ ಸಂಶೋಧನಾ ಅಧಿಕಾರಿ ಮಹದೇವ ಸ್ವಾಮಿ ಅವರು ತಿಳಿಸಿದರು.

ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿನ ಅಧಿಕಾರಿಗಳು ಇಎಸ್‌ಐ-ಪಿಎಫ್ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಸರ್ಕಾರದ ಅಡಿಯಲ್ಲಿ ಬರುವ ವಿವಿಧ ಯೋಜನೆಗಳ ಅನುಕೂಲಗಳ ಬಗ್ಗೆ ತಿಳಿಸುವುದು ಪ್ರತಿಯೊಬ್ಬ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಕರ್ತವ್ಯವಾಗಿದ್ದು, ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ಆದಷ್ಟು ಅವರು ಕೆಲಸ ಮಾಡುವಂತಹ ಸ್ಥಳಗಳಲ್ಲಿ ನಿರ್ಮಿಸಿಕೊಡಬೇಂದು ಅಧಿಕಾರಿಗಳಿಗೆ ತಿಳಿಸಿದರು.

ಪೌರಕಾರ್ಮಿಕರ ಸುರಕ್ಷತೆಗಾಗಿ ಕಾಲಕಾಲಕ್ಕೆ ಅವರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಗಾಗಲ್ಸ್, ಸ್ಯಾನಿಟೈಸರ್, ಗಂಬೂಟ್‌ಹೆಲ್ಮೆಟ್, ಇತ್ಯಾದಿ ಅಗತ್ಯ ಪರಿಕರಗಳನ್ನು ಕಡ್ಡಾಯವಾಗಿ ಧರಿಸಲು ಸೂಚಿಸಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಚನ್ನಪಟ್ಟಣ, ಕನಕಪುರ, ಮಾಗಡಿ, ಬಿಡದಿ, ಹಾರೋಹಳ್ಳಿಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ರಾಮನಗರ ನಗರಸಭೆಯ ಅಧಿಕಾರಿಗಳು, ಸಫಾಯಿ ಕರ್ಮಚಾರಿ ಆಯೋಗದ ಸದ್ಯಸರಾದ ಶಿವಕುಮಾರ ಸ್ವಾಮಿ, ನಾಗರಾಜ್, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರುಗಳಾದ ಹರೀಶ್ ಬಾಲು, ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಗರ-ಸ್ಥಳೀಯ ಸಂಸ್ಥೆಗಳು, ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳ ಪ್ರಗತಿ ಪರೀಶಿಲನೆಯನ್ನು ನಡೆಸಲಾಯಿತು.

More articles

Latest article