ನವದೆಹಲಿ: ತಮಿಳುನಾಡಿನ ಪಂಬನ್ ದ್ವೀಪದಿಂದ ಶ್ರೀಲಂಕಾದ ವಾಯವ್ಯ ಕರಾವಳಿಯ ಮನ್ನಾರ್ ದ್ವೀಪಕ್ಕೆ ಸಂಪರ್ಕಿಸುವ ರಾಮ ಸೇತು ಕುರಿತು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ತನ್ನ ಪ್ರಾತಿನಿಧ್ಯವನ್ನು ತ್ವರಿತವಾಗಿ ನಿರ್ಧರಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಈ ಅರ್ಜಿಯ ವಿಚಾರಣೆಗೆ ಒಪ್ಪಿದೆ. ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, 4 ವಾರಗಳ ಬಳಿಕ ವಿಚಾರಣೆಯನ್ನು ಮತ್ತೆ ನಡೆಸುವುದಾಗಿ ತಿಳಿಸಿದೆ.
ತಮಿಳುನಾಡಿನ ಪಂಬನ್ ದ್ವೀಪದಿಂದ ಶ್ರೀಲಂಕಾದ ವಾಯವ್ಯ ಕರಾವಳಿಯ ಮನ್ನಾರ್ ದ್ವೀಪಕ್ಕೆ ಸಂಪರ್ಕಿಸುವ ಸುಣ್ಣದ ಕಲ್ಲಿನ ಸೇತುವೆಯೇ ರಾಮ ಸೇತು ಎಂದು ನಂಬಲಾಗಿದೆ. ಈ ಸೇತುವೆಗೆ ಆ್ಯಡಮ್‌ನ ಸೇತುವೆ ಎಂದೂ ಕರೆಯಲಾಗುತ್ತದೆ.
2023ರ ಜ. 19ರಂದು ಕೇಂದ್ರ ಸರ್ಕಾರ ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸುವ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.