ಜೈಪುರ: ರಾಜಸ್ಥಾನ ವಿಧಾನಸಭೆ ಬಿಜೆಪಿ ಶಾಸಕ ಕನ್ವರ್ ಲಾಲ್ ಮೀನಾ ಅವರ ಶಾಸಕ ಸ್ಥಾನ ರದ್ದಾಗಿದೆ. ಈ ಸಂಬಂಧ ವಿಧಾನಸಭೆಯ ಕಾರ್ಯದರ್ಶಿ ಅಧಿಕೃತ ಆದೇಶ ಹೊಡಿಸಿದ್ದಾರೆ. ಮೇ 1ರಿಂದ ಕನ್ವರ್ ಲಾಲ್ ಮೀನಾ ಅವರ ಶಾಸಕ ಸ್ಥಾನ ರದ್ದಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಸ್ಪೀಕರ್ ಅವರು ವಕೀಲರಿಂದ ಕಾನೂನು ಸಲಹೆ ಪಡೆದು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
20 ವರ್ಷಗಳ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರಿಗೆ ಪಿಸ್ತೂಲ್ ತೊರಿಸಿ ಬೆದರಿಸಿದ ಆರೋಪದ ಹಿನ್ನೆಲೆಯಲ್ಲಿ ಕನ್ವರ್ ಲಾಲ್ ಮೀನಾ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಜಲವಾರ್ ನ್ಯಾಯಾಲಯ 2020ರ ಡಿಸೆಂಬರ್‌ನಲ್ಲಿ ಕನ್ವರ್ ಲಾಲ್ ಮೀನಾಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು.
ಈ ಶಿಕ್ಷೆಯನ್ನು ಪ್ರಶ್ನಿಸಿ ಕನ್ನರ್ ಲಾಲ್ ಮೀನಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಕೂಡ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ಕನ್ವರ್ ಲಾಲ್ ಶಿಕ್ಷೆ ಪ್ರಮಾಣವನ್ನು 23 ತಿಂಗಳಿಗೆ ಇಳಿಸುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಸದ್ಯ ಕನ್ವರ್ ಲಾಲ್ ಮೀನಾ ಮೇ 21ರಿಂದ ಜಲವಾರ್ ಜೈಲಿನಲ್ಲಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ಹಾಗಾಗಿ ಸಹಜವಾಗಿ ಅವರ ಶಾಸಕ ಸ್ಥಾನ ರದ್ದಾಗಲಿದೆ.
ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಎರಡು ವರ್ಷದ ಒಳಗಿನ ಶಿಕ್ಷೆಗೆ ಶಾಸಕ ಸ್ಥಾನ ರದ್ದಾಗುವುದಿಲ್ಲ.