ಮುಂಗಾರು ಆರಂಭ: ಮುಂಜಾಗ್ರತಾ ಕ್ರಮವಹಿಸಲು ಬಿಬಿಎಂಪಿ ಆಯುಕ್ತರ ಸೂಚನೆ

Most read

ಬೆಂಗಳೂರು: ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಂಗಾರು ಮಳೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಯುಕ್ತರು ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದು, ಎಲ್ಲಾ ಅಧಿಕಾರಿಗಳು ವಿಪತ್ತು ನಿರ್ವಹಣೆ ಕಾಯ್ದೆಯಡಿ ಅಗತ್ಯ ಕ್ರಮಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಕಳೆದ ವರ್ಷ ಮಳೆಗಾಲದಲ್ಲಿ ಹೆಚ್ಚು ಸಮಸ್ಯೆಯಾಗಿದ್ದ ಪ್ರದೇಶಗಳಲ್ಲಿ ಈ ಬಾರಿ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಈ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಾಯಿ ಲೇಔಟ್, ಪೈ ಲೇ ಔಟ್, ಕೇಂದ್ರೀಯ ವಿಹಾರ್ ಅಪಾರ್ಟ್‌ ಮೆಂಟ್‌, ಕೋಗಿಲು ಕ್ರಾಸ್, ಸರ್ಜಾಪುರ ರಸ್ತೆ (ಇಬ್ಬಲೂರು ಜಂಕ್ಷನ್), ಅಬ್ಬಿಗೆರೆ ಕೆರೆ ಕೋಡಿ, ಮೈಸೂರು ರಸ್ತೆ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಾಕೀತು ಮಾಡಿದರು.
ನಗರದಲ್ಲಿ 198 ಪ್ರವಾಹ ಪೀಡಿತ ಪ್ರದೇಶಗಳ ಜೊತೆಗೆ ಹೊಸದಾಗಿ 11 ಪ್ರದೇಶಗಳು ಸೇರಿದಂತೆ ಒಟ್ಟು 209 ಪ್ರವಾಹ ಪೀಡಿದ ಪ್ರದೇಶಗಳಿವೆ. ಈ ಸಂಬಂಧ ಈಗಾಗಲೇ 166 ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಕಿ 43 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಖುದ್ದು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 180 ಕಡೆ ನೀರು ನಿಲ್ಲುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗವು ಗುರುತಿಸಿದ್ದು, ಈ ಪೈಕಿ ಸಂಬಂಧಪಟ್ಟ ಇಂಜಿನಿಯರ್‌ ಗಳು ಸಂಚಾರಿ ಪೊಲೀಸ್ ವಿಭಾಗ ನೀಡಿರುವ ಪಟ್ಟಿ ಅನುಸಾರ ಸ್ಥಳ ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಕಾಮಗಾರಿಗಳನ್ನು ನಡೆಸಬೇಕು. ಜತೆಗೆ ರಸ್ತೆ ಬದಿ ಅಳವಡಿಸಿರುವಂತಹ ಗ್ರೇಟಿಂಗ್ಸ್‌ ಗಳ ಬಳಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಸೈಡ್ ಡ್ರೈನ್‌ ಗಳಿಗೆ ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಬಿಬಿಎಂಪಿಯ ನಿಯಂತ್ರಣ ಕೊಠಡಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಬೇಕು. ಈ ಸಂಬಂಧ ಕೂಡಲೇ ಇಲಾಖಾವಾರು ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಬೇಕು. ಅದರ ಜೊತೆಗೆ ಎಸ್.ಡಿ.ಆರ್.ಎಫ್/ ಎನ್.ಡಿ.ಆರ್.ಎಫ್ ಅಧಿಕಾರಿಗಳ ಪಟ್ಟಿ ಸಿದ್ದಪಡಿಸಬೇಕು. ನಿಯಂತ್ರಣ ಕೊಠಡಿಗಳಲ್ಲಿ ಮಳೆಗಾಲಕ್ಕೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಸಿದಧವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.

More articles

Latest article