ಬೆಂಗಳೂರು: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಳು ಕಡ್ಡಾಯವಾಗಿ ಭೇಟಿ ನೀಡಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ಮಾತನಾಡಿದರು.
ಮಳೆ ಹಾನಿ ಪ್ರದೇಶಗಳಿಗೆ ಡಿಸಿ, ಸಿಇಒ ತಕ್ಷಣ ಕಡ್ಡಾಯವಾಗಿ ಭೇಟಿ ನೀಡಿ ಅಗತ್ಯ ಪರಿಹಾರ ಒದಗಿಸಬೇಕು. ಸಂಪೂರ್ಣ ಮನೆ ಹಾನಿ ಪ್ರಕರಣಗಳಲ್ಲಿ ರೂ. 1.20 ಲಕ್ಷ ಮನೆ ಹಾನಿ ತಕ್ಷಣ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ಕಳೆದ 125 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಳೆ ಹಾನಿಗೆ ಪರಿಹಾರ ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ಜಿಲ್ಲೆಗಳಲ್ಲಿ SDRF ಅಡಿ ಒಟ್ಟಾರೆಯಾಗಿ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಲಭ್ಯವಿದೆ ಎಂದರು.
ಅತಿವೃಷ್ಟಿಯಿಂದ ಮನೆಗಳಿಗೆ ಹಾನಿ ಉಂಟಾದರೆ ಈಗಾಗಲೇ ಪರಿಹಾರ ಒದಗಿಸುವ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ತಕ್ಷಣ ಪರಿಹಾರ ಒದಗಿಸುವ ಕಾರ್ಯ ನಡೆಯಬೇಕಿದೆ. ಭೂ ಕುಸಿತದಂತಹ ಪ್ರಕರಣಗಳಲ್ಲಿ ಸಾವಿನ ಸಂಭಾವ್ಯತೆಯನ್ನು ತಪ್ಪಿಸಲು, ಜನರ ತೆರವು ಕಾರ್ಯ ಸೇರಿದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸ್ಮಶಾನ ಮತ್ತು ಕಬರಸ್ತಾನಗಳಿಗೆ ಜಮೀನು ಒದಗಿಸಲು ಆದ್ಯತೆ ನೀಡಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆ ಖಾಸಗಿ ಜಮೀನು ಖರೀದಿ ಮಾಡಿ ಒದಗಿಸಬೇಕು. ಹಾಸ್ಟೆಲ್ ಗಳಿಗೆ ನಿವೇಶನ ಗುರುತಿಸುವ ಸಂದರ್ಭದಲ್ಲಿ ಊರಿನಿಂದ ಬಹಳ ದೂರವಿರುವ ನಿರ್ಜನ ಪ್ರದೇಶದಲ್ಲಿ ನೀಡಬಾರದು. ನಿವೃತ್ತ ಸೈನಿಕರಿಗೆ ನಿವೇಶನ ಕುರಿತಾದ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಿ ಅವರಿಗೆ ಜಮೀನು ಒದಗಿಸಬೇಕು. ಪ್ರತಿ ತಾಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನ ಸಂಪೂರ್ಣ ಮಾಹಿತಿ ಲಭ್ಯವಿದ್ದು, ಒತ್ತುವರಿಯಾಗಿದ್ದರೆ ಅದನ್ನು ತಕ್ಷಣ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದರು.
ಮುಂದಿನ ಸಭೆಯ ವೇಳೆ ನಿವೇಶನ ಲಭ್ಯವಿಲ್ಲದ ಬಗ್ಗೆ ಯಾವುದೇ ದೂರು ಬರಬಾರದು. ಸೈನಿಕರ ಕಲ್ಯಾಣ ನಿಗಮ ಸ್ಥಾಪಿಸುವ ಕುರಿತಾದ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಯುವನಿಧಿ ಯೋಜನೆಯಡಿ ಪ್ರತಿ ಫಲಾನುಭವಿಗೆ ಎರಡು ವರ್ಷಗಳ ಅವಧಿಗೆ ನೆರವು ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಫಲಾನುಭವಿಗಳಿಗೆ ಉದ್ಯೋಗ ದೊರೆತರೆ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಿದರೆ ನೆರವು ಸ್ಥಗಿತಗೊಳ್ಳುತ್ತದೆ.ಒಟ್ಟು 59 ತಾಲೂಕುಗಳಲ್ಲಿ ಕ್ರೀಡಾಂಗಣಗಳು ಲಭ್ಯವಿಲ್ಲ. ಎಲ್ಲಾ ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ಗುರುತಿಸಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು.